ಮಂಗಳವಾರ, ಮಾರ್ಚ್ 25, 2025

ಹಕ್ಕಿ ಗೂಡಿಗೆ ಮರಳಿದೆ

ಕಡಲು ದಾಟಿ ದೂರ ಹಾರಿದೆ ಹೊಸ ಹಕ್ಕಿ,
ಹೊಸ ಕನಸು ಕಟ್ಟಲು,
ಹೊಸ ಗೂಡು ಹುಡುಕಲು,
ಹಸಿದ ಹೊಟ್ಟೆ ಹೊರೆಯಲು,

ಜಗವು ಹೊಸತಾಗಿದೆ,
ಬಲು ಸುಂದರವಾಗಿದೆ,
ಹಳೆಯ ಗೂಡು ಹಳತಾಗಿದೆ,
ತಾಯಿ ಬೇರು ಸಡಿಲಾಗಿದೆ,

ಕೈಯ ತುತ್ತು ಮರೆತಾಗಿದೆ,
ಹಣದ ಬೆನ್ನು ಹತ್ತಿದೆ,
ಕರುಳ ಕರೆ ಕೇಳಿಸದೆ,
ಬಹಳ ಕಾಲವಾಗಿದೆ.

ಹೊಸ ಗೂಡು ದೊರಕಿದೆ,
ರಥವು ಕೈ ಸೇರಿದೆ,
ಹೃದಯ ರಾಗ ಹಾಡಿದೆ,
ಲಾಲಿ ಹಾಡು ಕೇಳಿದೆ..

ಊರ ದಾರಿ ಮರೆತಿದೆ, 
ಇಲ್ಲೇ ಸುಖವಾಗಿದೆ,
ಸ್ವರ್ಗ ಬಳಿಯೆ ಬಂದಿದೆ,
ಅದು ತಾನಾಗಿಯೇ ಕಾದಿದೆ.

ಸುಖದ ನೆರಳ ಬಾನಲಿ,
ಕಾರ್ಮೋಡ ಕವಿದಿದೆ,
ಕರೋನಾ ಮಾರಿ ಕಾಡಿದೆ,
ಊರ ನೆನಪಾಗಿದೆ.

ಕೆಲಸ ಹೊರಟು ಹೋಗಿದೆ,
ಕೈ ಖಾಲಿಯಾಗಿದೆ,
ಆರೋಗ್ಯ ಮೂಲೆ ಸೇರಿದೆ,
ಬದುಕು ಬಂಧನವಾಗಿದೆ.

ಮುತ್ತು ಜಾರಿ ಹೋಗಿದೆ,
ಕೈ ತುತ್ತು ನೆನಪಾಗಿದೆ,
ಬೇರೆ ದಾರಿ ಕಾಣದೆ,
ಹಕ್ಕಿ ಊರ ದಾರಿ ಹಿಡಿದಿದೆ.

ತಾಯಿ ನೆಲದ ಘಮಲು,
ಮೂಗಿಗೆ ತಾಗಲು,
ಹೊಸ ಹುರುಪು ಬಂದಿದೆ,
ಎಲ್ಲ ನೋವು ಮರೆಸಿದೆ.

ಹೆತ್ತ ಒಡಲು ತಣಿಸಿದೆ,
ಕಣ್ಣೀರ ಕಡಲು ಹರಿದಿದೆ,
ಹೇಳಲು ಪದವಿಲ್ಲದೆ,
ಜೀವ ಒದ್ದಾಡಿದೆ.

ಕೈ ತುತ್ತು ದೊರಕಿದೆ,
ಒಲವ ನೋಟ ಜೊತೆಗಿದೆ.
ಜೀವ ಹಗುರಾಗಿದೆ,
ನಿದ್ದೆ ಜೋಂಪು ಹತ್ತಿದೆ.

ಹಕ್ಕಿ ಬೆಳಗ ಸಾರಿದೆ,
ಹಸಿರು ಗದ್ದೆ ಕರೆದಿದೆ,
ಹಾರೆ ಕತ್ತಿ ಕೈ ಸೇರಿದೆ,
ದುಡಿದು ತಿನುವ ಮನಸ್ಸಾಗಿದೆ.

ಹೊಟ್ಟೆ ತುಂಬಾ ಅನ್ನವು,
ಮನಸು ತುಂಬಾ ಪ್ರೀತಿಯು,
ಅದರ ಒಳಗೆ ಶಾಂತಿಯು,
ಕಣ್ಣು ತುಂಬಾ ನಿದ್ದೆಯು,

ಪರಿಶುದ್ಧ ಗಾಳಿಯು,
ಉತ್ತಮ ಆರೋಗ್ಯವೂ,
ಇದರ ಮುಂದೆ ಶೂನ್ಯವು,
ದೊಡ್ಡ ಹುದ್ದೆ, ಕೈ ತುಂಬ ಹಣ.

ಹಳೆಯ ಗೂಡು ಸೊಗಸಾಗಿದೆ,  
ನೋಟ ಮಾತ್ರ ಬದಲಾಗಿದೆ,
ಹಕ್ಕಿ ಗೂಡಿಗೆ ಮರಳಿದೆ,
ತಾಯಿನಾಡನು ಮರೆಯದೆ||2||





ಶನಿವಾರ, ಮಾರ್ಚ್ 15, 2025

ನಾನಿನ್ನು ಮರೆತಿಲ್ಲ

ನಾನಿನ್ನೂ ಮರೆತಿಲ್ಲ,
ಅತ್ತಾಗ ಹೆಗಲಾದವರನು,
ಬಿರುಬಿಸಿಲಿಗೆ ನೆರಳಾದವರನು,
ಕಲ್ಲುಮುಳ್ಳಿನ ದಾರಿಯಲ್ಲಿ ಜತೆ ನಡೆದವರನು,
ಒಳಿತು ಬಯಸಿದವರನು,
ಕತ್ತಲಲಿ ದಾರಿತೋರಿದವರನು,
ತಿದ್ದಿ ಬುದ್ಧಿ ಹೇಳಿದವರನು,
ವಿದ್ಯೆಯ ಧಾರೆ ಎರೆದವರನು,
ತಾನು ಕರಗಿ ನನಗೆ ನೀರೆರೆದವರನು,
ಕಣ್ಣಲ್ಲಿ ಕಣ್ಣಿಟ್ಟು ಕಾದವರನು,
ನನಗಾಗಿ ಜೀವನವನು ತೇದವರನು ,
ನಿಮ್ಮೆಲ್ಲರ ಋಣಭಾರವಿದೆ,
ಅದರ ಜತೆ ಭಾರವಾದ ಹೃದಯವೂ.!

ನಾನಿನ್ನೂ ಮರೆತಿಲ್ಲ,
ಅಪವಾದ ಹೋರಿಸಿದವರನು,
ಬೆನ್ನಹಿಂದೆ ಆಡಿಕೊಂಡವರನು,
ನಂಬಿಕೆಗೆ ಮೋಸಮಾಡಿದವರನು,
ಬೆನ್ನಿಗೆ ಚುಚ್ಚಿದವರನು,
ಕಣ್ಣೀರಿಗೆ ಕಾರಣರಾದವರನು,
ಕುಹಕದ ನಗು ನಕ್ಕವರನು,
ತಟ್ಟೆಗೆ ಕೈಯಿಕ್ಕಿದವರನು,
ಭರಿಸಲಾಗದ ನೋವಿದೆ,
ಜತೆಗೆ ಭಾರವಾದ ಹೃದಯವೂ.!

ನಾನಿನ್ನೂ ಮರೆತಿಲ್ಲ,
ಓ ದೇವರೇ, ನೀನು ಕಾಯುವೆಯೆಂದು,
ನೀನು ಲೆಕ್ಕದಲ್ಲಿ ಪಕ್ಕ,
ಪಾಪ ಪುಣ್ಯಗಳ ಕೊಡವು ತುಂಬಿದ ಮೇಲೆ,
ನೀನು ಕಾಯುವುದಿಲ್ಲ, ಅರೆಕ್ಷಣವೂ,
ಕೊಡುವುದೆಲ್ಲವ ಕೊಡುವೆ ಅಸಲು ಸಮೇತ,
ಕಾಯಬೇಕಿದೆ ಅಷ್ಟೇ ತಾಳ್ಮೆಯಿಂದ,
ನಂಬಿಕೆಯ ತೊರೆದಿಲ್ಲ,
ನಾನಿನ್ನೂ ಮರೆತಿಲ್ಲ,
ನೀನು ಜತೆಗಿರುವೆಯೆಂದು, 
ನಾನಿನ್ನೂ ಮರೆತಿಲ್ಲ...

ಶುಕ್ರವಾರ, ಫೆಬ್ರವರಿ 21, 2025

ಬದಲಾವಣೆ

ಅಪ್ಪ ನೆಟ್ಟ ಆಲದ ಮರ ತುಸು ಹಳತಾಯಿತು,
ಕಾಯದಿರಿ ಧರೆಗುರುಳಲು.
ಹೊಸ ಮರವ ನೆಟ್ಟು ಬಿಡಿ, ನೆರಳಾಗಲಿ,
ನಿಮಗೂ, ಮಕ್ಕಳಿಗೂ, ಅತ್ತ ಬಂದವರಿಗೂ,
ಸಮಯ ಬೇಕಿದೆ ಅದಕು, ಚಿಗುರಲು, ಬೆಳೆಯಲು, ಕಲಿಯಲು ಒಳಹೊರಗುಗಳ.

ಹುಸಿ ಊರುಗೋಲುಗಳ ನೀಡದಿರಿ,
ಎಳೆಯ ಗಿಡಕೆ,
ಅದು ಕಲಿಯಲು ತಾನಾಗಿಯೇ ಬದುಕಲು,
ಎಲ್ಲಿ ಚಿಗುರಲಿ, ಎಲ್ಲಿ ಬೇರುಬಿಡಲಿ,
ಕೇಳದಿರಲಿ ಯಾರನೂ,
ಕಾಯದಿರಲಿ ಪರರನು.

ಸಂಬಂಧಗಳ ಉಳಿಸಲು, ಎಷ್ಟೆಂದು ಹೆಣಗುವಿರಿ,
ಜೀವ ಬಳಲುವ ತನಕ, ತಾಳ್ಮೆ ಮುಗಿಯುವ ತನಕ....ಕಾಯದಿರಿ...
ಹೇಳಿಬಿಡಿ ಮನದ ಮಾತು,
ಅರ್ಥವಾದರೆ ಹೊರೆ ಕಡಿತವಾಗುವುದು,
ಇಲ್ಲವಾದರೆ ಮನದ ಭಾರವಾದರೂ ಇಳಿಯುವುದು, ಚಿಂತಿಸದಿರಿ.

ಸೋಮವಾರ, ಜನವರಿ 27, 2025

ತುಸು ನಗಲು

ಕಲಿತ ವಿದ್ಯೆಯ ಮರೆತು,
ಕೋಟಿ ವಿದ್ಯೆಯ ಕಲಿತು,
ಬದುಕಿನ ಸಾಗರದಿ ಈಜು ಕಲಿಯುತ್ತಾ,
ಬಂದ ಅಲೆಯ ಜೊತೆ ಒಂದಾಗಿ,
ತೇಲುತ್ತ ಮುಳುಗುತ್ತ , ಕನಸಿನ ಹರಿಗೋಲು ಹಿಡಿದು, ಸೋಲದಾ ಛಲದಲಿ,
ಮುಂದೆ ಸಾಗುವಳು, ದಣಿವು ಮರೆತು.

ಕರುಳ ಬಳ್ಳಿಗಳ ನೆರಳು ತಾನಾಗಿ,
ತುಸು ಬಾಡದಂತೆ, ನೀರು ಗೊಬ್ಬರವುಣಿಸಿ,
ಎಲ್ಲೆಲ್ಲೋ ಹರಡದಂತೆ, ಊರುಗೋಲನು ಕೊಟ್ಟು, ಮನತುಂಬ ಆಸೆ, ನಂಬಿಕೆಯಿಟ್ಟು 
ಭರವಸೆಯ ನಾಳೆಗಾಗಿ, ಹಗಲುಗನಸುಗಳ ಕಾಣುತ್ತಾ, ಅದ ನಿಜವಾಗಿಸುವ ಭರದಲ್ಲಿ ,
ಮರೆತಿಹಳು ಹಗಲು ರಾತ್ರಿಗಳ..

ಅತ್ತರೂ ಅಳದಂತೆ ,
ನಗದಿದ್ದರೂ ನಗುತ್ತಿರುವಂತೆ,
ಖುದ್ದು ನಟಿಸುವ ಅವಳು,
ಮಹಾನಟಿಯಲ್ಲ, ಹಣಕಾಗಿ ನಟಿಸುವುದೂ ಅಲ್ಲ, ತನ್ನವರಿಗಾಗಿ, ನೋವ ನುಂಗಿದವಳು,
ಹೊತ್ತು ಹೆತ್ತವರ ಋಣವ ಮರೆಯದ,
ಪಣವ ತೊಟ್ವವಳು.

ಎಲ್ಲ ಜಂಜಡದಲ್ಲಿ, ಮರೆತಿಹಳೆ ತನ್ನ ತಾನು,
ಇಲ್ಲ ಹಾಗೇನಿಲ್ಲ, ಸಮಯ ಹುಡುಕುವಳು,
ತನಗಾಗಿ ತಾನು, ಬಳಲಿ ಬೆಂಡಾದಾಗ, ಒಂದು ನಿಟ್ಟು ಸಿರು ಬಿಡಲು, ಬಿಡುವಾದ ಕಿವಿಗೆ ಆಕಾಶವಾಣಿಯ ಕಲರವ ಕೇಳಿಸಲು, ಮನದ ಭಾರವ ಲೇಖನಿಗೆ ಹೇಳಲು, ಕೆಲಸದ ಜೊತೆ ಮನೋರಂಜಿಸಲು, ಕಲಿತಿದ್ದಾಳೆ ತನ್ನನ್ನು ತಾನೇ ಸಂತೈಸಲು, ನೋವು ಮರೆತು  ನಗಲು,
ತುಸು ನಗಲು....

ಭಾನುವಾರ, ಜನವರಿ 19, 2025

ತಾಳ್ಮೆ

ಕಡಿದಷ್ಟೂ ಚಿಗುರುವ ಮರದ,
ಮರೆಯದ ತಾಳ್ಮೆ,
ತೆಗೆದಷ್ಟೂ ಕಟ್ಟುವ ಜೇಡನ
ಮುಗಿಯದ ತಾಳ್ಮೆ,
ಎಸೆದ ಕಸವನ್ನು ಮೇಲಕ್ಕೆಸೆಯುವ
ಸಾಗರದ ತಾಳ್ಮೆ,
ತೆಗೆದಷ್ಟು ಮತ್ತೆ ಜೇನು ಕೂಡಿಸುವ,
ಜೇನಿನ ತಾಳ್ಮೆ,
ಕಸ ಕಡ್ಡಿ ಸೇರಿಸಿ ಗೂಡು ಕಟ್ಟುವ
ಹಕ್ಕಿಯ ತಾಳ್ಮೆ,
ಅಗೆದರೂ, ತುಳಿದರೂ
ಕೋಪಿಸದ ಭೂಮಿಯ ತಾಳ್ಮೆ,
ಅತ್ತರೂ, ಹೊಡೆದರೂ
ಮುನಿಯದ ಮಾತೆಯ ತಾಳ್ಮೆ,
ಹೆಗಲೇರಿದರೂ, ಮುಗಿಲ ಕೇಳಿದರೂ,
ಬೇಡವೆನ್ನದ ಅಪ್ಪನ ತಾಳ್ಮೆ,
ಅರಿತು ಕೇಳಿದರೂ, ಅರಿಯದೆ ಕೇಳಿದರೂ
ವಿವರಿಸುವ ಗುರುವಿನ ತಾಳ್ಮೆ,

ಕಲಿಯಬೇಕಿದೆ ಮಗುವೇ,
ಸದಾ ನಗುವ ಒಲವ ತಾಳ್ಮೆ,
ಅಂತರಂಗವ ಅರಿವ ತಾಳ್ಮೆ,
ಸರಿ ತಪ್ಪುಗಳ ತಿಳಿವ ತಾಳ್ಮೆ,
ಗೌರವಿಸುವ ಮೊದಲ ತಾಳ್ಮೆ,
ಹಂಚಿ ತಿನುವ , ನಿಜದ ತಾಳ್ಮೆ,
ಶರಣು ಎನುವ ಶರಣರ ತಾಳ್ಮೆ,
ಸೋತು ಗೆಲ್ಲುವ ನಿತ್ಯ ತಾಳ್ಮೆ,
ತನ್ನ ತಾನು ಮರೆತ ಯೋಧನ ತಾಳ್ಮೆ,
ತಾಳುತ ಬಾಳುವುದೇ ನಿಜದ ಮೇಲ್ಮೆ,
ತಿಳಿ ನೀನಿದರ ಗೆಲ್ಮೆ..
ತಿಳಿ ನೀನದರ ಮೇಲ್ಮೆ.



ಭಾನುವಾರ, ಜನವರಿ 5, 2025

ಜಾಣ ಕಿವುಡು

ಹೇಳಿದ್ದು ಕೇಳಲು ಒಲವಿಲ್ಲದರಿಗೆ,
ಕೇಳಿದರೂ ಉತ್ತರಿಸಲು ಇಚ್ಚೆಯಿಲ್ಲದರಿಗೆ,
ಹೇಳಲು ಉತ್ತರವೇ ಇಲ್ಲದವರಿಗೆ,
ಕೇಳಿ ಕೇಳಿ ಸುಸ್ತಾದವರಿಗೆ,
ಕೇಳಿದ್ದನ್ನು ಈಡೇರಿಸಲಾಗದವರಿಗೆ,
ಸತ್ಯ ಹೇಳಲಾಗದರಿಗೆ,
ತಲೆಯಲ್ಲಿ ಯೋಚನೆ ತುಂಬಿದವರಿಗೆ,
ಬಹುದೊಡ್ಡ ವರದಾನ, ಈ ಜಾಣ ಕಿವುಡು.

ಮತ್ತೆ ಮತ್ತೆ ಹೇಳಲು ಸಮಯವಿಲ್ಲದವರಿಗೆ,
ಹೇಳಿದ್ದೇ ಹೇಳುವ ತಾಳ್ಮೆಯಿಲ್ಲದರಿಗೆ,
ಸ್ವಾಭಿಮಾನಿಯಾದ ಗುಣವುಳ್ಳರಿಗೆ,
ಕಾಯಲಾಗದ ಅಸಹಾಯರಿಗೆ,
ಅರ್ಥಮಾಡಿಸುವ ಒಲವಿಲ್ಲದವರಿಗೆ,
ಬಲು ದೊಡ್ಡ ಶಾಪ ಈ ಜಾಣ ಕಿವುಡು.

ಅದೇನು ಹುಟ್ಟಿನಿಂದ ಬಂದಿದೆಯೋ,
ಅದನ್ನು ಅವರೆಲ್ಲಿ ಕಲಿತರೋ ?
ಕಿವಿಗೆ ಏನು ಹೊಕ್ಕಿದೆಯೋ,
ಇವರದು ದಪ್ಪ ಚರ್ಮವೋ,
ಕಿವಿ ಕೇಳುವುದೇ ಇಲ್ಲವೋ,
ಈ ಕಲ್ಲು ಬಂಡೆಯ ಹತ್ತಿರ,
ಮಾತಾಡಿ ಏನು ಫಲ,
ಎಂದು ಬಯ್ಯದೆ ಇರುವರೆ ಯಾರಾದರೂ?

ಮಾಡಲು ಕೆಲಸವಿಲ್ಲ, ಅರಿಯಲು ಬುದ್ಧಿಯಿಲ್ಲ
ಎಷ್ಟು ವಟಗುಟ್ಟುತ್ತಾರೆ ಇವರು,
ತಲೆ ಕೆಟ್ಟು ಹೋಗಿದೆ ಇವರ ಮಾತು ಕೇಳಿ,
ಇರಲಿ, ಇವರಿಗೆ ಕಲಿಸಬೇಕು ಎಂದು,
ಮೌನವ್ರತ ಮಾಡುವವರು,
 ಬಯ್ಯಬಹುದು ಒಳಗಿನಿಂದ,
ಮತ್ತೆ ಒಳಗೊಳಗೇ ನಗುತ್ತಿರಬಹುದು,
ತಮ್ಮ ಜಾಣ ಕಿವುಡಿಗೆ.

ಅವರಿಗೆ ಅವರು ಸರಿ,
ಇವರಿಗೆ ಇವರು ಸರಿ,
ಹೇಳುವುದು ಯಾರು? ಯಾವುದು ಸರಿ?
ಅವರಿವರ, ಇವರವರ, ಅರಿತು ಬಾಳಿದರೆ
ಆಗುವುದು ಎಲ್ಲ ಸರಾಸರಿ.
ಆಗುವುದು ಎಲ್ಲ ಸರಾಸರಿ...



ಶುಕ್ರವಾರ, ಜನವರಿ 3, 2025

ಎಲ್ಲಿಗೆ ಈ ಪಯಣ?

ಎಲ್ಲಿಗೆ ಈ ಪಯಣ?
ಮುಗಿಯದ ಈ ಕದನ,
ಕಾಡಿದೆ ಈ ಕವನ,
ಮರುಗಿದೆ ಕವಿಮನ,

ಅರೆಬಟ್ಟೆ, ಮುರಿದ ಮನೆ,
ಹಸಿದ ಕಂಗಳು,
ಉರಿದಿದೆ ಸಂಸಾರದ ಸಂಸ್ಕಾರ,
ಉಳಿದುದು ಬರಿ ತಿರಸ್ಕಾರ.

ಒಂದೆಡೆ ಮೆರೆಯುವ, ಮೈಮರೆಯುವ,
ಲಾಲಸೆಯ, ಸುಖ ಬಯಸುವ,
ನಿಯಮವಿರದ, ಅಂಕೆ ಮೀರಿದ,
ಸುಂಕವಿಲ್ಲದ ನಡತೆ.

ಇನ್ನೊಂದೆಡೆ ಮರುಗುವ, ಕರಗುವ,
ನೀತಿಗಂಜುವ, ನಿಯಮ ಮೀರದ,
ಚಿಪ್ಪಿನೊಳಗೆ ಅಡಗಿಕೊಳ್ಳುವ, 
ಬಲಿಪಶುವಿನ ಒಡಲ ಉರಿ.

ಅವರಿಗೆ ಬೇಕಾಗಿದೆ ಸುಖ,
ಅವಳಿಗಿಲ್ಲಿ ಮುಗಿಯದ ಶೋಕ,
ನ್ಯಾಯ ದೊರೆವುದೇ ಇಲ್ಲಿ,
ಅವಳ ಕಾಯುವಿಕೆಯಲ್ಲಿ.

ಪರರಿಗೆ ಹೇಳುವ ನೀತಿ
ಅನ್ವಯಿಸದೆ ಅದೆ ರೀತಿ,
ಯಾರು ತಿಳಿವರು ಇದರ ಶ್ರುತಿ
ಅವರಿಗಿಲ್ಲ ಯಾರ ಭೀತಿ.

ಹೀಗೆ ನಡೆದರೆ ಬಾಳುವ ರೀತಿ
ಎಲ್ಲಿಗೆ ಮುಟ್ಟುವುದೊ ಈ ವಿಕೃತಿ,
ಯಾರಿಗೂ ತಿಳಿದಿಲ್ಲ, ಕದ್ದು ಮುಚ್ಚಿ ಹಾಲು ಕುಡಿಯುವ ಬೆಕ್ಕಿನ ಚೆಲ್ಲಾಟ.

ಆಸೆ ಮುಗಿಯುವ ತನಕ
ವಯಸ್ಸು ಮೀರುವ ತನಕ,
ಕಾಲ ಕರೆಯುವ ತನಕ,
ಕಾಯಬೇಕೆನು? ಬಿಡದೆ ತಾನು?

ಹಾಗೊಮ್ಮೆ ಹೀಗೊಮ್ಮೆ,
ಹೊಯ್ದಾಡುತ್ತ ಸಾಗುವ ಮನಸಿಗೆ,
ಕಣ್ಣೀರ ಸಾಂತ್ವಾನ,
ತುಸು ನೆಮ್ಮದಿಯ ನಿದ್ದೆ,

ಮರೆಯದೆ ಕೊಟ್ಟಿರುವ,
ಕರುಣಾಳು ದೇವರಿಗೆ,
ಮರೆತು ಶರಣಾಗುವುದ,
ಮರೆತಿಲ್ಲ ಅವಳು, ತೊರೆದಿಲ್ಲ ಅವಳು...

ಭಾನುವಾರ, ಡಿಸೆಂಬರ್ 1, 2024

ದಾನಶೂರ

ಸೂರ್ಯಪುತ್ರನಾಗಿ ಜನಿಸಿ,
ಸೂತಪುತ್ರನೆಂದು ಕರೆಸಿಕೊಂಡ,
ಕ್ಷತ್ರಿಯಕುಲದಲ್ಲಿ ಜನಿಸಿ,
ಹೀನಕುಲದವನೆಂದೆನಿಸಿಕೊಂಡ,
ಹೆತ್ತವರಿದ್ದರೂ ಅನಾಥನಾದ,
ಹಿರಿಯ ಮಗನಾಗಿ ವಂಶದ ರಾಜನಾಗಿ,
ಮೆರೆಯಬೇಕಾದವ, ಗೌರವಿಸಬೇಕಾದವ,
ಶತೃವಾದ, ಪರಮಶತೃವಾದ.
ತಾನು ಮಾಡದ ತಪ್ಪಿಗೆ, ಹುಟ್ಟಿನಿಂದಲೇ ಬಲಿಯಾದ ಕರ್ಣ, ಒಬ್ಬ ನತದೃಷ್ಟ.

ವಿದ್ಯೆ ಕಲಿಯುವ ಕನಸಿಗೆ ,
ಅಡ್ಡಿಯಾಯಿತು ಅವನ ಕುಲ,
ಸುಳ್ಳು ಹೇಳಿದ ಅವನಿಗೆ,
ದೊರೆಯಲಿಲ್ಲ ವಿದ್ಯೆಯ ಬಲ,
ದೊರೆತದ್ದು ಶಾಪದ ಫಲ,
ಆದರೂ ಅವ ಬಿಡಲಿಲ್ಲ ಛಲ.

ಆಸರೆಯಾದ ಕೌರವೇಂದ್ರ,
ಅವನ ಮೇಲಿನ ಪ್ರೀತಿಗೋ,
ಅಥವಾ ಕರುಣೆಗೋ,
ಅವನ ಸಾಮರ್ಥ್ಯ ನೋಡಿಯೋ, 
ಅರ್ಜುನನ ಪ್ರತಿಸ್ಪರ್ದಿಯಾಗಿಸಲೋ,
ಎಂದು ಕರ್ಣ ಕೇಳಲಿಲ್ಲ,
ಬದಲು ಋಣಿಯಾದ,
ಬದುಕು ಕೊಟ್ಟ ಗೆಳೆಯನಿಗೆ.

ಕೈಹಿಡದ ನಂಬಿಕೆಯ ಮುರಿಯಲಿಲ್ಲ,
ಕೊಟ್ಟ ಮಾತನು ತಪ್ಪಲಿಲ್ಲ,
ಅನ್ನದಾ ಋಣ ಮರೆಯಲಿಲ್ಲ,
ಒಡಹುಟ್ಟುಗಳ ಕೊಲ್ಲಲಿಲ್ಲ ,
ದಾನವನ್ನು ತೊರೆಯಲಿಲ್ಲ,
ತನಗಾಗಿ ಏನನು ಬಯಸಲಿಲ್ಲ,

ಭೂಮಿಯನ್ನು ಕೊಟ್ಟುಬಿಟ್ಟ,
ಹುಟ್ಟುಕವಚವ ತೆಗೆದು ಕೊಟ್ಟ,
ಕರ್ಣಕುಂಡಲ ಕೊಟ್ಟು ಕೆಟ್ಟ,  
ತೊರೆದ ಮಾತೆಗೆ ,ಮಾತು ಕೊಟ್ಟ,
ತೊಟ್ಟಬಾಣವ ಮರಳಿ ತೊಡದ,
ಪಣವ ತೊಟ್ಟ, 
ಅರಿತು ಅರಿತು ಮರೆತೆ ಬಿಟ್ಟ,
ತನ್ನ ಒಳಿತನು ಮರೆತು ಬಿಟ್ಟ.

ಸೋತು ಗೆದ್ದ ವೀರನಾದ,
ಮಾತು ತಪ್ಪದ ದೀರನಾದ,
ಹೆಗಲು ನೀಡುವ ಗೆಳೆಯನಾದ,
ಎಲ್ಲ ಕ್ಷಮಿಸುವ ಜ್ಞಾನಿಯಾದ,
ತಿಳಿದೂ ತಿಳಿದೂ ಮೌನಿಯಾದ,
ಅವನು ಮರೆಯದ ಶೂರನಾದ,
ಯಾರೂ ಮರೆಯದ ದಾನಶೂರನಾದ!.








ರೈತನ ಬದುಕು

ಸೂರ್ಯೋದಯವಾಗಿದೆ, ಭೂಮಿ ಬೆಳಕಾಗಿದೆ.  
ಹೂವು ಅರಳಿ ನಗುತಿದೆ, ಹೊಸ ಗಂಧ ಚೆಲ್ಲಿದೆ.
ಕಾಯಿ ಹಣ್ಣಾಗಿದೆ, ಅದು ಯಾರಿಗಾಗಿಯೋ ಕಾದಿದೆ.
ಕೋಗಿಲೆ ಕುಹೂ ಹಾಡಿದೆ, ತನ್ನ ಪ್ರಿಯನ ಕರೆದಿದೆ.
ನವಿಲು ಗರಿಬಿಚ್ಚಿ ಕುಣಿದಿದೆ, ಅದು ಹೆಣ್ಣ ಸೆಳೆದಿದೆ.

ಮಳೆಗಾಲ ಬಂದಿದೆ, ಹೊಸ ಹುರುಪ ತಂದಿದೆ,
ಭೂಮಿ ಹಸಿರಾಗಿದೆ, ಹೊಸ ವಿಷಯ ಹೇಳಿದೆ.
ಗಾಳಿ ಜೋರು ಬೀಸಿದೆ, ಮರವು ತೂಗಿ ಬಾಗಿದೆ.
ಗುಡುಗು ತಾಳ ಹಾಕಿದೆ, ಮಿಂಚು ಜೊತೆಗೆ ಕುಣಿದಿದೆ.
ಕಾದು ಕೂತ ಭೂಮಿಗೆ, ಹೊಸ ಕನಸು ಬಂದಿದೆ.

ಮಳೆ ಬಿಡದೆ ಸುರಿದಿದೆ, ತುಸುವು ಬಿಡುವು ನೀಡದೆ,
ನದಿಯು ಉಕ್ಕಿ ಹರಿದಿದೆ, ಗುಡ್ಡ ಬೆಟ್ಟ ಕುಸಿದಿದೆ.
ಮರವು ಧರೆಗೆ ಉರುಳಿದೆ, ಗೂಡು ನೆಲಕೆ ಬಿದ್ದಿದೆ,
ಮನೆಗಳೆಲ್ಲ ಕುಸಿದಿದೆ, ಬದುಕು ಬೀದಿಗೆ ಬಂದಿದೆ.
ರೈತಗೊಂದು ಕನಸಿದೆ, ಅದು ಮಣ್ಣು ಪಾಲಾಗಿದೆ.

ಜಗವು ಮುಂದೆ ಸಾಗಿದೆ, ಯಾರಿಗೂನು ಹೇಳದೆ,
ಬಿದ್ದ ಗೂಡ ಮರೆತಿದೆ, ಹೊಸ ಗೂಡನು ಹುಡುಕಿದೆ,
ಹೊಸ ಸಸಿಯು ಮೊಳೆದಿದೆ, ಮಣ್ಣನಾಸರೆ ಪಡೆದಿದೆ,
ರೈತ ಎದ್ದು ನಿಂತನು, ಟೊಂಕ ಕಟ್ಟಿ ನಿಂತನು,
ಹಳೆಯ ನೋವ ಮರೆತನು, ಹೊಸ ಕನಸು ಕಂಡನು.

ತಂಗಾಳಿ ಲಾಲಿ ಹಾಡಿತು, ಮರವು ತೂಗಿ ಬಾಗಿತು,
ನದಿಯ ನೀರು ಹರಿಯಿತು, ಹೊಲವು ತುಂಬಿ ತೊನೆಯಿತು.
ಹೊಸ ಮಣ್ಣು ಹುಲುಸಾಯಿತು. ಮನ ತುಂಬಿ ಬಂದಿತು.
ಫಸಲು ಮನೆಯ ತುಂಬಿತು, ರೈತನ ಮನ ಹಗುರಾಯಿತು,
ಹೊಸ ಬೆಳಕು ಮೂಡಿದೆ , ಅದು ಬಾಳ ಬೆಳಗಿದೆ.

 ಮರಳಿ ಯತ್ನವ ಮಾಡು, ಜೇಡ ಕಲಿಸಿದ ಪಾಠ,
ಕಾಯಕವೇ ಕೈಲಾಸ, ಇದು ರೈತ ಬದುಕಿದ ಹಾದಿ,
ಆಳಾಗಬಲ್ಲವನು ಅರಸಾಗಬಲ್ಲ, ಇದು ಶ್ರಮಿಕನ ನೀತಿ,
ಕಾಯುವಿಕಿಗಿಂತನ್ಯ ತಪವು ಇಲ್ಲ, ಇದು ಶ್ರೇಷ್ಠ ವಚನ,
ದಾರಿ ಕತ್ತಲಾದರೇನು? ಕನಸಿಲ್ಲವೇ ಬೆಳಕಾಗಿ

ಓಹ್ ಮುಗ್ಧ ಜೀವ, ಮರೆತುಬಿಡು ನೋವ,
ನೀ ನಡೆ ಮುಂದೆ, ಸೋಲ ಬಿಡು ಹಿಂದೆ,
ನಿನ್ನ ಬೆವರ ಹನಿ, ಬೆಳೆಗಾಗಲಿ ಇಬ್ಬನಿ,
ನಿನ್ನ ಎದೆಯ ಹರಕೆ, ಇದೆ ನಮ್ಮ ಹಾರೈಕೆ,
ತಂಪಾಗಿರಲಿ ನಿನ್ನ ಹೆತ್ತು, ಹೊತ್ತ ಭೂಮಿ.

ಮಕ್ಕಳ ಜತೆ

ಮಕ್ಕಳೊಂದಿಗೆ ಮಗುವಾಗಿ,

ಅವರ ನಗುವಿಗೆ ಜೊತೆಯಾಗಿ,

ನೋವಿನಲ್ಲಿ ನೆರಳಾಗಿ,

ಒಲವ ಮಳೆಯ ಸುರಿಸಿ,

ಕನಸು ಬೆಳಕು ದೀಪವಾಗಿ,

ಅವರು ಕಳೆವ ‌ಸಮಯವಾಗಿ.


ಮಾತು ಕೇಳೋ ಜೊತೆಯಾಗಿ 

ಬುದ್ಧಿ ಹೇಳೋ ಗುರುವಾಗಿ

ಸಂತೈಸೋ ಹೆಗಲಾಗಿ,   

ಮಮತೆಯ ಮಡಿಲಾಗಿ

ತಲೆಸವರೋ ತಂದೆಯಾಗಿ

 ದಾರಿ ತೋರೋ ಬೆಳಕಾಗಿ

ಜೊತೆ ಇರುವ ಭರವಸೆಯಾಗಿ,

ನೆರಳು ನೀಡೋ ಮರವಾಗಿ.


ನುಡಿದಂತೆ ನಡೆದು ದಾರಿ ತೋರಿ,

ಸತ್ಯ ಧರ್ಮದ ಪಾಠ ಹೇಳಿ

ನೀತಿ ನಡತೆಯ ಬೆಲೆಯ ತಿಳಿಸಿ

ಹೆಣ್ಣು,ಮಣ್ಣಿಗೆ  ತಲೆಯ ಬಾಗಿ

ಬಾಳುವಂತೆ ಬದುಕು ಕಲಿಸಿ

ಹೆತ್ತವರಾಗಿರಿ ಮಕ್ಕಳೊಂದಿಗೆ,

ಮಕ್ಕಳಾಗಿ ನಿಮ್ಮ ಹೆತ್ತವರೊಂದಿಗೆ....








ಹಕ್ಕಿ ಗೂಡಿಗೆ ಮರಳಿದೆ

ಕಡಲು ದಾಟಿ ದೂರ ಹಾರಿದೆ ಹೊಸ ಹಕ್ಕಿ, ಹೊಸ ಕನಸು ಕಟ್ಟಲು, ಹೊಸ ಗೂಡು ಹುಡುಕಲು, ಹಸಿದ ಹೊಟ್ಟೆ ಹೊರೆಯಲು, ಜಗವು ಹೊಸತಾಗಿದೆ, ಬಲು ಸುಂದರವಾಗಿದೆ, ಹಳೆಯ ಗೂಡು ಹಳತಾಗಿದೆ,...