ಹದಿಹರೆಯ ಎನ್ನುವುದು ಪ್ರತಿಯೊಬ್ಬರ ಜೀವನದ ಅತೀ ಮುಖ್ಯ ಘಟ್ಟ. ನಾವು ಮುಂದೆ ಏನಾಗುತ್ತೇವೆ ಎಂಬುದನ್ನು ನಿರ್ಧರಿಸುವ ಸಮಯ. ಸರಿಯಾದ ಮಾರ್ಗದರ್ಶನ ದೊರೆತರೆ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ. ಆದ್ದರಿಂದ ಹೆತ್ತವರಿಂದ,ಗುರುಹಿರಿಯರಿಂದ, ಸ್ನೇಹಿತರಿಂದ ಸರಿಯಾದ ಸಲಹೆಗಳು ಸಿಗುವುದು ತುಂಬಾ ಅವಶ್ಯಕ.
ಹದಿಹರೆಯದಲ್ಲಿ ಮಕ್ಕಳ ಮನಸ್ಸು ಮೃದುವಾದ ಮಣ್ಣನಂತಿರುತ್ತದೆ. ನಾವು ಯಾವ ಆಕಾರ ನೀಡುತ್ತೇವೋ ಅದೇ ಆಕಾರ ತಳೆಯುತ್ತದೆ. ಒಂದು ಉತ್ತಮ ಮೂರ್ತಿಯಾಗಿಯೂ ಮಾಡಬಹುದು. ಉಪಯೋಗವೇ ಇಲ್ಲದಂತೆ ಹಾಳಾಗಬಹುದು. ಆದ್ದರಿಂದ ಎಚ್ಚರಿಕೆ ಅಗತ್ಯ.
ಹದಿಹರೆಯದ ಮಕ್ಕಳ ಮನಸ್ಥಿತಿ
- "ಹುಚ್ಚುಕೋಳಿ ಮನಸ್ಸು, ಅದು ಹದಿನಾರರ ವಯಸ್ಸು" ಹಾಡಿನ ಸಾಲಿನಂತೆ, ಮಕ್ಕಳ ಮನಸ್ಸು ಸೂಕ್ಷ್ಮವಾಗಿ, ಚಂಚಲವಾಗಿ, ಮುಗ್ದವಾಗಿ, ಅಪಕ್ವವಾಗಿ ಇರುತ್ತದೆ.
- ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವ ತಾಳ್ಮೆಯಾಗಲಿ,ಪ್ರಬುದ್ಧತೆಯಾಗಲಿ ಅವರಿಗಿರುವುದಿಲ್ಲ.
- ಬುದ್ಧಿಮಾತು ಕೇಳುವ ಮನಸ್ಥಿತಿಯೂ ಅವರಿಗಿರುವುದಿಲ್ಲ.
- ನಾವು ಏನಾದ್ರೂ ಹೇಳಲು ಹೋದರೆ, ಒಂದೋ ಸುಮ್ಮನಿರುತ್ತಾರೆ, ಅಥವಾ ಕೇಳದವರಂತೆ ನಟಿಸುತ್ತಾರೆ, ಅಥವಾ ನನಗೆ ಏನೂ ಹೇಳಲು ಬರಬೇಡಿ ಎನ್ನುತ್ತಾರೆ.
- ಆ ಕಡೆ ದೊಡ್ಡವರೂ ಅಲ್ಲ, ಈ ಕಡೆ ಸಣ್ಣವರೂ ಅಲ್ಲ. ಅವರಿಗೆ ಏನು ಹೇಳಬೇಕು, ಹೇಗೆ ಹೇಳಬೇಕು, ಎಷ್ಟು ಹೇಳಬೇಕು ಎಂದು ತಿಳಿಯದೆ ಅಪ್ಪ ಅಮ್ಮ ಗೊಂದಲಕ್ಕೆ ಒಳಗಾಗುತ್ತಾರೆ.
- ಅವರು ಗಳಿಸಿದ ಎಲ್ಲ ಅನುಭವಗಳನ್ನು ಉಪಯೋಗಿಸಿದರೂ, ಈ ಮಕ್ಕಳನ್ನು ಸಂಭಾಳಿಸುವುದು ಹೇಗೆ ಎಂದು ತಿಳಿಯುದಿಲ್ಲ.
- ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು, ಅದಕ್ಕೆ ಹೊಂದಿಕೊಳ್ಳಲು ಅವರು ಹರಸಾಹಸ ಪಡುತ್ತಿರುತ್ತಾರೆ.
- ಒಂದು ಕಡೆ ಬೇರೆ ಬೇರೆ ರೀತಿಯ ಆಕರ್ಷಣೆಗಳು ಅವರನ್ನು ಸೆಳೆಯುತ್ತವೆ.
- ಓದುವ ಒತ್ತಡಗಳು ಹೆಚ್ಚಿರುತ್ತವೆ
- ಹೆತ್ತವರ ನಿರೀಕ್ಷೆಗಳನ್ನು ಮುಟ್ಟಲು ಆಗುವುದಿಲ್ಲ
- ತಾವು ಚೆನ್ನಾಗಿ ಕಾಣಬೇಕೆಂಬ ಯೋಚನೆಗಳುಕಾಡುತ್ತವೆ.
- , ಸಾಮಾಜಿಕ ಜಾಲತಾಣಗಳ ಪ್ರಭಾವ ಬಹಳ ಇರುತ್ತವೆ.
- ಸ್ನೇಹಿತರು ಮತ್ತು ಪರಿಸರದ ಪ್ರಭಾವಗಳು ಅವರನ್ನು ಹೈರಾಣಾಗಿಸುತ್ತವೆ.
- ಇವೆಲ್ಲದರ ನಡುವೆ ಸಮತೋಲನ ಸಾದಿಸುವಷ್ಟು ಅವರಿನ್ನೂ ಪಳಗಿರುವುದಿಲ್ಲ.
ಅದಕ್ಕೆ ಏನಾದರೂ ಹೇಳಲು ಹೋದರೆ, ಕೂಗಾಡುತ್ತಾರೆ. ಈಗಂತೂ ಅತಿಯಾದ ಮುದ್ದಿನಿಂದ ಬೆಳೆದ ಏಕೈಕ ಮಕ್ಕಳು, ಸ್ವಲ್ಪವೂ ತಾಳ್ಮೆಯಿಲ್ಲದೆ, ಸಂಯಮವೂ ಇಲ್ಲದೇ ಬೇಕಾದಂತೆ ವರ್ತಿಸುತ್ತಾರೆ. ಆದ್ದರಿಂದ ಈ ವಯಸ್ಸಿನ ಮಕ್ಕಳಿರುವ ಮನೆಗಳಲ್ಲಿ ನಿತ್ಯ ವಾಗ್ವಾದ ಅಸಮಾದಾನ ಖಾಯಂ ಎನ್ನುವಂತಾಗಿದೆ.
ಹೆತ್ತವರು ಸುಮ್ಮನೆ ತಲೆ ಬಿಸಿ ಮಾಡಿ ಪ್ರಯೋಜನವಿಲ್ಲ.
ಹೆತ್ತವರಿಗೆ ಕಿವಿಮಾತು
- ಮಕ್ಕಳ ಮನಸನ್ನು ಅರಿಯುವುದು ಬಹಳ ಮುಖ್ಯ.
- ನಾವು ಅವರ ವಯಸ್ಸಿನಲ್ಲಿ ಹೇಗಿದ್ದೇವೋ ಹಾಗೆ ಅವರು ಇರಲು ಆಗುವುದಿಲ್ಲ. ಕಾಲ ಬದಲಾಗಿದೆ. ಮಕ್ಕಳೂ ಬದಲಾಗಿದ್ದಾರೆ.ನಾವೂ ಬದಲಾಗಬೇಕಿದೆ.
- ನಮ್ಮ ಕಾಲದ ಕಟ್ಟುನಿಟ್ಟಿನ ನಿಯಮಗಳು ಈಗಿನ ಕಾಲಕ್ಕೆ ಪೂರ್ತಿಯಾಗಿ ಹೊಂದಿಕೊಳ್ಳುವುದಿಲ್ಲ. ಆದ್ದರಿಂದ ಅಗತ್ಯ ಬದಲಾವಣೆ ಮಾಡಿಕೊಂಡು, ಮಕ್ಕಳಿಗೆ ಅದನ್ನು ಪಾಲಿಸುವಂತೆ ಹೇಳಬೇಕು.
- ಮಕ್ಕಳಿಗೆ ಅತಿಯಾಗಿ ಮುದ್ದು ಮಾಡದೆ, ಸಣ್ಣವರಿರುವಾಗಲೇ ತಿದ್ದಿ ಬುದ್ಧಿ ಹೇಳುವುದನ್ನು ಅಭ್ಯಾಸ ಮಾಡಬೇಕು.
- ಜೋರು ಮಾಡಿಯೇ ಹೇಳಬೇಕು ಎಂದೇನಿಲ್ಲ. ಮೃಧುವಾಗಿ, ಸಮಾಧಾನದಿಂದ ಬುದ್ಧಿ ಹೇಳಿದರೆ ಮಕ್ಕಳು ಖಂಡಿತ ಕೇಳುತ್ತಾರೆ.
- ಗುರುಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂದು ನಾವು ನಡೆದು ಅವರಿಗೆ ತೋರಿಸಬೇಕಿದೆ.
- ದೇವರಮೇಲಿನ ನಂಬಿಕೆ ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎಂದು ತಿಳಿಸಬೇಕಿದೆ.
- ಶಿಸ್ತು, ಶ್ರದ್ಧೆ,ಪರಿಶ್ರಮಗಳು ಸಾಧನೆಗೆ ಅಡಿಪಾಯ ಎಂದು ಅವರಿಗೆ ತಿಳಿಸಬೇಕಿದೆ.
- ಹಣದ ಬೆಲೆ ಏನು? ಗುಣದ ಬೆಲೆ ಏನು? ಎನ್ನುವುದು ಅವರಿಗೆ ಅರ್ಥವಾಗಬೇಕಿದೆ.
- ಸರಿ ತಪ್ಪುಗಳ ವ್ಯತ್ಯಾಸ ಅರ್ಥಮಾಡಿಸಬೇಕಿದೆ.
- ಸೂಕ್ಷ್ಮ ಸಂವೇದನೆಗಳನ್ನು ಕಲಿಸಬೇಕಿದೆ.
- ಹೊಂದಿಕೊಳ್ಳುವ ಗುಣವೂ ಬಹಳ ಮುಖ್ಯ.
- ಮನೆಯ ಕೆಲಸಗಳನ್ನೂ ಮಾಡುವ ತಿಳುವಳಿಕೆ,ಆಸಕ್ತಿ, ಜಾಣ್ಮೆಯೂ ಅವರಿಗೆ ಅಗತ್ಯವಿದೆ.
ಮಕ್ಕಳು ಹಿರಿಯರು ಹೇಳಿದಂತೆ ಕೇಳಬೇಕು ಎಂಬ ಮಾತು ಈಗಿನ ಕಾಲಕ್ಕೆ ಹೊಂದಿಕೊಳ್ಳುವುದು ತುಸು ಕಷ್ಟ. ಬುದ್ಧಿವಂತರು, 'ಕಾಲಕ್ಕೆ ತಕ್ಕ ಕೋಲ' ಎಂಬಂತೆ ಮಕ್ಕಳ ಅಭಿರುಚಿಗೆ, ಇಷ್ಟಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುತಿದ್ದಾರೆ. ಅದು ನಿಜವಾಗಿ ಇಂದಿನ ಅನಿವಾರ್ಯತೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ