ಸೂರ್ಯನಾಗುವಾಸೆಯಿಲ್ಲ ನನಗೆ ,
ಭುವಿಗೆಲ್ಲ ಬೆಳಕು ಬೀರಿದರೇನು ?
ಯಾರೂ ಇಲ್ಲ ಅವನ ಜತೆ ,ಒಂಟಿ ಅವನು .
ಚಂದ್ರನಾಗುವಾಸೆಯಿಲ್ಲ ನನಗೆ ,
ಜಗಕೆ ತಂಪನೆರೆದರೇನು ?
ಒಲವ ಜಗಕೆ ಹಂಚಿದವನು ,
ಎಲ್ಲಿ ಮರೆಯಾದ ಅವನು ,
ಕಡಲಾಗುವಾಸೆಯಿಲ್ಲ ನನಗೆ
ಮೊರೆವ ತೆರೆಯ ಆಟಕಿಂತ
ಮಿಗಿಲೇನಿದೆಯೆಂದು ಹಾತೊರೆವರೆಲ್ಲ ,
ಅಲ್ಲಿ ಹೊಳೆವ ನೀರು ದಾಹ ನೀಗದಲ್ಲ!
ಬೆಟ್ಟವಾಗುವಾಸೆಯಿಲ್ಲ ನನಗೆ ,
ಎಷ್ಟು ನುಣ್ಣಗಿದೆ ದೂರದಿಂದ ,
ಹತ್ತಿದರೆ ತಿಳಿವುದು ಕಲ್ಲುಮುಳ್ಳಿದೆಯೆಂದು ,
ಉಸಿರಾಡಲು ಕಷ್ಟವೆಂದು.
ದೊಡ್ಡ ದೊಡ್ಡ ಆಸೆಗಳಿಲ್ಲ ,
ಆದರೂ ನಿರಾಶಾವಾದಿಯಲ್ಲ ,
ನನಗಿರುವ ಆಸೆಗಳು ಸಣ್ಣ ಸಣ್ಣದು ,
ಆದರು ಬಣ್ಣಬಣ್ಣದ್ದು .
ವೈಶಾಖದ ಮೊದಲ ಮಳೆಯಾಗುವಾಸೆ ,
ಬೆಂದ ಧರೆಗೆ ತಂಪೆರೆಯುವಾಸೆ ,
ಭೂ ದೇವಿಗೆ ಹಸಿರು ಸೀರೆಯ ತೊಡಿಸುವಾಸೆ ,
ಪ್ರಕೃತಿಪ್ರೇಮಿಯಾಗಿ ಅಲ್ಲೇ ಕಳೆದುಹೋಗುವಾಸೆ .
ಉರಿವ ದೀಪವಾಗುವಾಸೆ ,
ಕುಡಿದ ಎಣ್ಣೆಯ ಋಣವ ತೀರಿಸುವಂತೆ ,
ತಾನುರಿದು ಬೆಳಕಾಗುವಾಸೆ ,
ಜಗ ಮೆಚ್ಚುವಂತೆ .
ಗುಡಿಯ ಹೊರಗಿನ ಮೆಟ್ಟಿಲಾಗುವಾಸೆ .
ಎಲ್ಲ ತುಳಿಯಲಿ , ಪಾಪ ಕಳೆಯಲಿ ,
ಅರಿತ, ಅರಿಯದ ನೋವು ನೀಗಲಿ
ಕರ್ಮ ಕಳೆದು ಮುಕ್ತಿ ದೊರೆಯಲಿ .
ಗಾಳಿಪಟದಂತೆ ಹಾರುವಾಸೆ ,
ಬೇಕಿಲ್ಲ ಯಾರ ಆಣತಿ ,
ಕೇಳಲ್ಲ ಯಾರು ಹೊನ್ನು ,
ಅವರದಲ್ಲ ಈ ಭೂಮಿ .
ನನ್ನ ಆಸೆಗಳು ನಿಜವಾಗುವುದಲ್ಲ ,
ಅದಕೆಂದು ನಾನು ಕಾಯುವುದಿಲ್ಲ .
ಕಾಯಲು ಸಮಯವೂ ಇಲ್ಲ ,
ನನಗೆ ಬೇಜಾರಿಲ್ಲ ..
ಬದುಕು ಕಲಿಸಿದ ಪಾಠಗಳು ,
ದಾರಿದೀಪವಾಗಿ ಬೆಳಕು ಬೀರುತಿವೆ
ನಗಲು ಕಲಿಸಿವೆ ಕಾರಣವಾ ಕೇಳದೆ ,
ವಾಸ್ತವದ ಸತ್ಯವನ್ನು ಅರಗಿಸಿಕೊಂಡು .
ನೆನಪುಗಳು ಜತೆಯಲಿವೆ,
ಕನಸುಗಳು ನಗುತಲಿವೆ
ಕಾಲುಗಳು ನಡೆಯುತಿವೆ ,
ಅರಿತ ಗುರಿಯೆಡೆಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ