ಮಿಕ್ಕಿ

Page title

 ಮಿಕ್ಕಿ ಬಿಲ್ಲಿಯ ಮಗ.  ಅವಳು ಎರಡು ಮಕ್ಕಳಲ್ಲಿ ಒಬ್ಬ. ಬೆಕ್ಕುಗಳ ಬಗ್ಗೆ ಹೆಚ್ಚಿನೂ ಗೊತ್ತಿಲ್ಲದ,ಇಷ್ಟವೂ ಇಲ್ಲದ ನಾನು ಅವನ ಬಗ್ಗೆ ಗಮನಹರಿಸಿರಲಿಲ್ಲ. ಕನಿಷ್ಠ ಪಕ್ಷ ಬಿಲ್ಲಿಯ ಮಕ್ಕಳ ಮುಖ ನೋಡಲೂ ಹೋಗಲಿಲ್ಲ. ಹಳೆಯ ಬಾರಿ ನನಗಾದ ಅನುಭವ ಮರಿಗಳ ಮುಖ ನೋಡಲೂ ಇಷ್ಟವಿಲ್ಲದಂತೆ ಮಾಡಿತ್ತು.

ಕಳೆದ ಬಾರಿ ಬಿಲ್ಲಿ ಮರಿ ಇಟ್ಟಾಗ ಬೆಂಚಿನ ಮೇಲೆ ಮರಿಗಳನ್ನು ಇಟ್ಟು ಕುಳಿತಿದ್ದಳು . ಒಂದು ಮರಿ ತಪ್ಪಿ ಕೆಳಗೆ ಬಿದ್ದು ಒದ್ಧಾಡುತಿತ್ತು. ಅದರ ಕೂಗು ಕೇಳಿ ಬಂದ ನಾನು, ಅಯ್ಯೋ ಪಾಪ ಎಂದು ಮರಿಯನ್ನು ಎತ್ತಿ ಬೆಂಚಿನ ಮೇಲೆ ಇಟ್ಟೆ. ಬಿಲ್ಲಿ ಮರಿಯನ್ನು ಮೂಸಿ ನೋಡಿ, ತನ್ನ ಇನ್ನೊಂದು ಮರಿಯ ಜತೆ ಬೇರೆ ಕಡೆ ಹೊರಟು ಹೋದಳು. ಈ ಮರಿ ಜೋರಾಗಿ ಕೂಗುತ್ತಿತ್ತು. ನಾನು ಪುನಃ ಮರಿಯನ್ನು ಎತ್ತಿ ಕೊಂಡು ಹೋಗಿ ಅವಳ ಬಳಿ ಬಿಟ್ಟೆ. ಅವಳು ಮತ್ತೆ ಜಾಗ ಬದಲಾಯಿಸಿದಳು. ನನಗೆ ತಲೆ ಬಿಸಿಯಾಯಿತು. ಬಿದ್ದು ಏಟಾಗಿದ್ದಕ್ಕೋ, ನಾನು ಮುಟ್ಟಿದ್ದಕ್ಕೋ ಬಿಲ್ಲಿ ಮರಿಯನ್ನು ಮೂಸಲೂ ಇಲ್ಲ. ಹಾಲು ಕುಡಿಸಲೂ ಇಲ್ಲ. ಆ ಮರಿ ಸತ್ತೇ ಹೋಯಿತು. ಅದು ನನ್ನನ್ನು ಬಹಳ ಕಾಡಿತು.


ಈ ಸಲ ಏನಾದರಾಗಲಿ ಎಂದು ಆ ಮರಿಗಳ ಮುಖ ನೋಡಲೂ ಹೋಗಲಿಲ್ಲ.ಮರಿಗಳು ಸ್ವಲ್ಪ ದೊಡ್ಡದಾಗಿ, ಮನೆ ತುಂಬಾ ಓಡಾಡಲು ಶುರು ಮಾಡಿದವು. ಊಟಕ್ಕೆ ಕುಳಿತಾಗ ಹತ್ತಿರ ಬಂದು ಕುಳಿತು ಮೀಯಾಂ ಎನ್ನುತಿದ್ದವು.ನಾನು ಕಿವಿ ಕೇಳಿದಂತೆ ನಟಿಸುತಿದ್ದೆ. ನೋಡಿಯೂ ನೋಡದಂತೆ ಇರುತ್ತಿದ್ದೆ. ಒಮ್ಮೆ ಊಟ ಮಾಡುತ್ತಿದ್ದಾಗ ನನ್ನ ಹತ್ತಿರ ಕೂತಿದ್ದ ಮಿಕ್ಕಿ ಎದ್ದು ನಿಂತು ನನ್ನ ಕಾಲಿಗೆ ತನ್ನ ಮುಖವನ್ನು ಉಜ್ಜತೊಡಗಿದ. ನಾನು ಅದನ್ನು ದೂರ ಕಳಿಸಿದೆ. ಮತ್ತೆ ಹತ್ತಿರ ಬಂದು ಕುಳಿತು ಮೀಯಾಂ ಎನ್ನುತ್ತ ಮಡಿಲು ಏರಿ ಕುಳಿತಿತು. ಎಷ್ಟೇ ಜೋರು ಮಾಡಿದರೂ ಕೆಳಗೆ ಇಳಿಯಲಿಲ್ಲ. ಆ ನಂತರ ಪ್ರತಿ ದಿನ ಹಾಗೆ ಮಾಡುತಿತ್ತು. ಕೆಳಗೆ ಕುಳಿತರೆ ಸಾಕು, ಓಡಿ ಬಂದು ಮಡಿಲಿನಲ್ಲಿ ಕುಳಿತುಕೊಳ್ಳುತಿತ್ತು. ನನಗೇ ಗೊತ್ತಿಲ್ಲದಂತೆ ಮಿಕ್ಕಿ ನನ್ನ ಮನಸಿಗೆ ಹತ್ತಿರವಾದ. ಅವನಿಗೆ ನನ್ನನ್ನು ಕಂಡರೆ ಇಷ್ಟ, ನನಗೂ ಅ‌ಷ್ಟೇ.

ಅಷ್ಟರಲ್ಲೇ ಮದುವೆ ನಿಶ್ಚಯವಾಯಿತು. ಅವನ ಮತ್ತು ನನ್ನ ಒಡನಾಟ ಹಾಗೆ ಮುಂದುವರೆಯಿತು. ಮದುವೆ ತಯಾರಿಯಲ್ಲಿ ದಿನಗಳುರುಳಿ , ಎಲ್ಲ ಗದ್ದಲ ಮುಗಿಸಿ ಗಂಡನ ಮನೆಗೆ ಹೋದ ಮೇಲೆ, ಅಲ್ಲಿನ ಹೊಸ ವಾತಾವರಣದಲ್ಲಿ ನಾನು ಮಿಕ್ಕಿಯನ್ನು ಮರೆತೇ ಬಿಟ್ಟೆ. ಸ್ವಲ್ಪ ದಿನಗಳ ನಂತರ ಮತ್ತೆ ಮನೆಗೆ ಹೋದಾಗಲೂ ಮಿಕ್ಕಿ ಓಡಿ ಬಂದ. ಮಾಮೂಲಿಗಿಂತ ಹೆಚ್ಚು ನನಗೆ ಅಂಟಿಕೊಂಡ.ಎರಡು ದಿನಗಳ ನಂತರ ತಿರುಗಿ ಹೊರಟಾಗ ಹೊರ ಜಗುಲಿಯಲ್ಲಿ ಕುಳಿತು ನನ್ನನ್ನೇ ನೋಡುತ್ತಿದ್ದ.  ಬೇಸರವಾಯಿತು...

ಮುಂದಿನ ಬಾರಿ ಹೋದಾಗ ಮಿಕ್ಕಿ ಎಲ್ಲೂ ಕಾಣಲಿಲ್ಲ. ಅಮ್ಮನನ್ನು ಕೇಳಿದಾಗ, ನೀನು ಕಳೆದ ಸಾರಿ ಬಂದು ಹೋದ ಮೇಲೆ, ಅವನು ಎಲ್ಲೂ ಕಾಣ್ತಾ ಇಲ್ಲ ಎಂದು ಹೇಳಿದಾಗ ನನ್ನ ಹೃದಯ ಭಾರವಾಯಿತು. ಅವನ ನೆನಪಾದಾಗ ಕಣ್ಣು ತುಂಬಿ ಬರುತ್ತದೆ. ಮಿಸ್ ಯು ಮಿಕ್ಕಿ...!

ಕಾಮೆಂಟ್‌ಗಳಿಲ್ಲ:

ಹಕ್ಕಿ ಗೂಡಿಗೆ ಮರಳಿದೆ

ಕಡಲು ದಾಟಿ ದೂರ ಹಾರಿದೆ ಹೊಸ ಹಕ್ಕಿ, ಹೊಸ ಕನಸು ಕಟ್ಟಲು, ಹೊಸ ಗೂಡು ಹುಡುಕಲು, ಹಸಿದ ಹೊಟ್ಟೆ ಹೊರೆಯಲು, ಜಗವು ಹೊಸತಾಗಿದೆ, ಬಲು ಸುಂದರವಾಗಿದೆ, ಹಳೆಯ ಗೂಡು ಹಳತಾಗಿದೆ,...