ಮಳೆ ಹೇಗಿತ್ತು
ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಆಗುತಿದ್ದ ಕಾಲವೊಂದಿತ್ತು. ಇಂತಹ ನಕ್ಷತ್ರದಲ್ಲಿ ಈ ರೀತಿಯ ಮಳೆ ಬರುತ್ತದೆ ಎಂದು ಹಿರಿಯರು ಕರಾರುವಾಕ್ಕಾಗಿ ಹೇಳುತ್ತಿದ್ದರು. ಅದು ಅವರ ಜೀವನಾನುಭವದ ಮಾತಾಗಿತ್ತು. ವಿಶೇಷ ಪರಿಣತಿ, ಆಧುನಿಕ ತಂತ್ರಜ್ಞಾನ ಬೇಕಾಗಿರಲಿಲ್ಲ.ಅವರ ಜೀವನದಂತೆ ಬಹಳ ಶಿಸ್ತು, ಸಂಯಮ ಪಾಲಿಸುತ್ತಿತ್ತು. ಅವರು ಪ್ರಕೃತಿಯ ಜೊತೆ ಹೊಂದಿಕೊಂಡು ಅದನ್ನು ಗೌರವಿಸುತ್ತಾ ಬದುಕುತ್ತಿದ್ದರು. ಅವರ ಲೆಕ್ಕಾಚಾರಗಳು ಎಂದೂ ತಲೆಕೆಳಗಾಗುತ್ತಿರಲ್ಲ. ಬದುಕು ತುಂಬಾ ಸರಳ ಸುಂದರವಾಗಿತ್ತು.
ಇಂದು ಏನಾಗಿದೆ ಮಳೆಗೆ?
ನಮ್ಮ ಬುದ್ದಿವಂತಿಕೆ ನಮಗೇ ಮುಳುವಾಗಿದೆ. ಪ್ರಕೃತಿಯ ಜೊತೆ ಹೊಂದಿಕೊಂಡು, ಅಗತ್ಯ ಬದಲಾವಣೆಗಳನ್ನು ನಮ್ಮಲ್ಲಿ ಮಾಡಿಕೊಳ್ಳುವ ಬದಲು ಪ್ರಕೃತಿಯನ್ನೇ ಬದಲಾಯಿಸಲು ಹೊರಟಿದ್ದೇವೆ. ನಾವು ಅಂದುಕೊಂಡ ಪಲಿತಾಂಶವನ್ನಷ್ಟೇ ಕೊಡಲು ಅದೇನು ಕಂಪ್ಯೂಟರ್ ಪ್ರೋಗ್ರಾಮಿಂಗ್ ಅಲ್ಲ. ನಿರ್ಜೀವ ವಸ್ತುವಲ್ಲ. ತನ್ನ್ನದೇ ಜೀವಂತಿಕೆಯಿಂದ ಬದುಕುತ್ತಾ , ತನ್ನ ನಿಯಮಗಳನ್ನು ತಾನೇ ರೂಪಿಸುತ್ತ ಸ್ವತಂತ್ರವಾಗಿ ಬದುಕುತ್ತಿರುವ ಜೀವವಾಹಿನಿ ಅದು. ನಮ್ಮ ಮಧ್ಯಪ್ರವೇಶ ಅದಕ್ಕೆ ಇಷ್ಟವಾಗುವುದಿಲ್ಲ. ಅದನ್ನರಿಯದ ಪರಮ ಮೂರ್ಖರು ನಾವು. ಕೊನೆಗೆ, ಏನು ಮಾಡಲು ಹೋಗಿ... ಏನು ಮಾಡಿದೆ ನೀನು ಎಂದು ಹಾಡುವಂತೆ ಆಗುತ್ತದೆ. ನಮ್ಮ ಅನಗತ್ಯ ಮಧ್ಯಸ್ಥಿಕೆಯಿಂದ ಪ್ರಕೃತಿಯ ಸಮತೋಲನ ತಪ್ಪಿ ಹೋಗಿದೆ. ಇನ್ನಾದರೂ ಮೌನವಾಗಿ ಪ್ರಕೃತಿಯ ಆದೇಶಗಳನ್ನು ಪಾಲಿಸೋಣ . ಮಳೆಗಾಗಿ ಜಾತಕಪಕ್ಷಿಯಂತೆ ಕಾಯುವ ಸಂಕಟ ತಪ್ಪಲಿ . ಮಳೆಗಾಲ ಶುರುವಾದ ಮೇಲೆ ಎಲ್ಲಿ ಏನಾಗುವುದೋ ಎಂಬ ಭಯ ತಪ್ಪಲಿ . ಬಿರುಗಾಳಿ, ಅತಿವೃಷ್ಟಿ, ಗುಡ್ಡಕುಸಿತ ನಿಲ್ಲಲಿ.. ಗುಡುಗು ಸಿಡಿಲು ನಿಲ್ಲಲಿ. ಮಳೆಯಾರ್ಭಟ ಕಡಿಮೆಯಾಗಲಿ , ಎಂದೆಲ್ಲ ಬಯಸುವ ನಾವು ಅದಕ್ಕಾಗಿ ಪ್ರಯತ್ನಿಸೋಣ . ಮೌನವಾಗಿ ಪ್ರಕೃತಿಯ ಆಗುಹೋಗುಗಳನ್ನು ಗಮನಿಸೋಣ. ಮಳೆಗಾಗಿ ಕಾಯೋಣ , ಕೃತಕ ಮಳೆ ಬೇಡ.. ಕೃತಕ ನೆರೆ , ಮತ್ತದರ ಬರೆ ಯಾವುದೂ ಬೇಡ. ಮೌನವಾಗಿ ಕಾಯೋಣ ಮಾಡಿದ ತಪ್ಪುಗಳಿಗಾಗಿ. ಮಳೆ ಬೇಕಾದಾಗ ಬಾರದೆ, ಬಂದಾಗ ಅತಿಯಾಗಿ ಬಂದು ತಲ್ಲಣ ಸೃಷ್ಟಿಸುತ್ತಿದೆ. ಅನಾಹುತಗಳ ಸರಮಾಲೆಯನ್ನು ಉಂಟುಮಾಡುತ್ತಿದೆ. ಕೈಗೆಟುಕದ ನಕ್ಷತ್ರದಂತೆ, ಮಳೆ ಮಾಯಾಮೃಗವಾಗದಿರಲಿ! ಮನಪೂರ್ವಕವಾಗಿ ಬೇಡೋಣ ....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ