ನಮ್ಮಿಂದ ದೂರವಾಗಿ ಬಹಳ ಸಮಯವಾದರೂ, ನಿರಂತರ ನೆನಪುಗಳಲ್ಲಿ ಕಾಡಿ, ನಮ್ಮನ್ನು ಖುಷಿಪಡುವ ಮುದ್ದು ಪ್ರಾಣಿಗಳೇ ಈ ಅಂಬರ ತಾರೆಗಳು.
ತುಕ್ಕು
ನಮ್ಮ ಹಟ್ಟಿಯಲ್ಲಿ ಶುಕ್ರವಾರ ಜನಿಸಿದ ಅದೃಷ್ಟವೇ ಈ ತುಕ್ಕು. ನಮ್ಮ ಮೊದಲ ಜೆರ್ಸಿ ಕರು. ಕಂದು ಬಣ್ಣದ ಮುದ್ದುಮುಖದ ದೊಡ್ಡ ಕರು. ಅವಳು ಬೆಳೆದಂತೆ ಮುದ್ದೂ ಬೆಳೆಯಿತು. ಬರೀ ನೋಟದಲ್ಲಿ ಮಾತ್ರವಲ್ಲ, ಗುಣದಲ್ಲೂ ಅವಳು ಮುದ್ದು. ಮುಂದೆ ಬಂದರೆ ಹಾಯಬೇಡ, ಹಿಂದೆ ಬಂದರೆ ಒದೆಯಬೇಡ, ನೀತಿಯವಳು. ಅವಳು ಹೇಳಿದ್ದು ಕೇಳುವ ಜಾಣಮರಿ. ಹೊಟ್ಟೆ ತುಂಬಿದರೆ ಸಾಕು ಎಂದು ಹಾಕಿದ್ದನ್ನು ತಿನ್ನುವವಳು. ಹುಲ್ಲುಮೇಯಲು ಕರೆದೊಯ್ಯುವಾಗ ಯಾವುದೇ ತಕರಾರಿಲ್ಲ. ಹಾಲು ಕರೆಯುವಾಗಲೂ ಅಷ್ಟೇ. ನಿಂತಲ್ಲಿಂದ ಅಲುಗಾಡದೆ ನಿಂತಿರುತ್ತಾಳೆ. ಕರು ಹಾಕಿ ೩ ತಿಂಗಳಷ್ಟೇ ಅದರ ಗೋಜು. ಆಮೇಲೆ ಕರು ಬೇಕಾಗಿರಲಿಲ್ಲ . ಹಾಲು ಕರೆಯುವಾಗ ನಮ್ಮ ತಲೆಯಲ್ಲಿ ಹೂ ಇದ್ದರೆ ಮಾತ್ರ ಮೊದಲೇ ಕೊಟ್ಟು ಬಿಡಬೇಕು. ಇಲ್ಲವಾದರೆ ಎಳೆದು ತಿನ್ನುತ್ತಿದ್ದಳು.
ಅತ್ತಿಯ ಹೆಣ್ಣು ಗಳೆಂದರೆ ಬಹಳ ಇಷ್ಟ ಅವಳಿಗೆ. ಮನೆ ಮುಂದೆ ಸ್ವಲ್ಪ ಎತ್ತರದಲ್ಲಿ ಇರುವ ಮರದಿಂದ ಹಣ್ಣು ಗಳನ್ನು ಬಾಯಿ ಹಾಕಿ ಚಪ್ಪರಿಸುತ್ತ ತಿನ್ನಲು ಶುರುಮಾಡಿದರೆ ವಾಪಸು ಬರುತ್ತಲೇ ಇರಲಿಲ್ಲ. ಸಾಕು ಬಾ ಎಂದರೂ ಕೇಳದೇ ತಿನ್ನುತ್ತಾ ಇರುತ್ತಿದ್ದಳು. ನಂತರ ಒಂದು ಸಣ್ಣ ಕಡ್ಡಿ ತೋರಿಸಿದರೆ ಸಾಕು ಓಡಿ ಬರುತ್ತಿದ್ದಳು. ಎಷ್ಟೆ ಹೇಳಿದರು, ಬೈ ಹುಲ್ಲಿನ ಮೂಟೆ ಗೆ ಮೈ ಉಜ್ಙೀದರೇನೇ ಅವಳಿಗೆ ಸಮಾಧಾನ.
ತುಕ್ಕುವಿನ ಅಮ್ಮ ಪುಟ್ಟು. ಬಹಳ ಜೋರು. ಸುಮ್ಮನೆ ಅವಳನ್ನು ಹಾಯುತಿದ್ದಳು. ಬಹಳ ವರ್ಷಗಳ ನಂತರ ಒಂದು ದಿನ ತುಕ್ಕುವಿಗೆ ಸಿಟ್ಟು ಬಂದು ಪುಟ್ಟವಿನ ಒಂದು ಕೋಡನ್ನು ಮುರಿದು ಬಿಟ್ಟಳು.ಆಮೇಲೆ ಪುಟ್ಟು ಎಂದು ಅವಳ ಜೊತೆ ಜಗಳವಾಡಲು ಹೋಗಲಿಲ್ಲ.
ಹೀಗಿದ್ದ ತುಕ್ಕು ವಿಗೆ ಒಮ್ಮೆ ಕೆಚ್ಚಲು ಬಾವು ಶುರುವಾಯಿತು. ಎಷ್ಟೇ ಮದ್ದು ಮಾಡಿ ನೋಡಿದರೂ ಗುಣವಾಗಲೇ ಇಲ್ಲ. ಅವಳು ಬಹಳ ಕೃಶವಾದಳು. ನಿಂತಲ್ಲೇ ನಿಲ್ಲುತ್ತಿದ್ದಳು. ಇಲ್ಲವಾದರೆ ಮಲುಗುತ್ತಿದ್ದಳು. ಸ್ವಲ್ಪ ಏನಾದರೂ ತಿನ್ನುತಿದ್ದಳು. ತಿಂಗಳು ಕಳೆದರೂ ಅವಳ ಪರಿಸ್ಥಿತಿ ಸುಧಾರಿಸುವ ಬದಲು ಹಾಳಾಗುತ್ತಾ ಹೋಯಿತು. ಮಲಗಿದಲ್ಲಿಂದ ಏಳಲಾಗದೆ ಕಣ್ಣೀರು ಸುರಿಸುತಿದ್ದಳು. ಅವಳನ್ನು ನೋಡಿ ಹೃದಯ ಹಿಂಡಿದಂತಾಗುತಿತ್ತು. ಒಂದು ದಿನ ಎಲ್ಲಾ ನೋವಿಗೆ ಕೊನೆ ಹಾಡಿ, ತುಕ್ಕು ನಮ್ಮಿಂದ ದೂರವಾದಳು. ಆದರೆ ಮನಸಿನಿಂದ ದೂರ ಹೋಗಲೇ ಇಲ್ಲ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ