ನಾಯಿಗಳೆಂದರೆ ಎಲ್ಲಾರಿಗೂ ಇಷ್ಟ. ಬೆಕ್ಕುಗಳೆಂದರೆ ಅಷ್ಟೇನೂ ಒಲವಿಲ್ಲ. ಅವುಗಳ ಅಂತರಂಗ ಅರಿವಾದರೆ ತಾನೇ! , ಇಷ್ಟವಾಗುವುದು. ಅವೇನೂ ಕೃತಘ್ನ ಪ್ರಾಣಿಗಳಲ್ಲ.. ಅನ್ನ ಕೊಡುವ ಕೈಯನ್ನು ಅದು ಮರೆಯುವುದಿಲ್ಲ. ಮುಖ ನೋಡಿ ಗುರುತಿಸಿ ಮಿಯಾಂ ಎಂದು ಕೂಗಿ, ಹಿಂಬಾಲಿಸಿ, ಬಾಯಿ ಅಗಲಿಸಿ ನಮ್ಮನ್ನು ಖುಷಿ ಪಡಿಸುವ ಅವುಗಳ ಮೂಕ ಪ್ರೇಮ ಮನ ತಣಿಸುತ್ತದೆ.. ಸಮಯವಾಗಿದೆ ಎಂದು, ಕೂಗಿ ನಿದ್ದೆಯಿಂದ ಎಬ್ಬಿಸಿ, ನಮ್ಮ ಹಿಂದೆ ಬಂದು ಹಾಲು ಕೊಡು ಎಂದು ಪಾತ್ರೆಯತ್ತ ನೋಡುತ್ತವೆ. ನಿಜ ತಾನೆ.. ನಾವು ಎಷ್ಟು ಹೊತ್ತಿಗೆ ಎದ್ದೇಳುತ್ತೇವೆ?, ಏನೇನು ಮಾಡುತ್ತೇವೆ ಪ್ರತಿಯೊಂದನ್ನೂ ಅವು ನೆನಪಿಟ್ಟುಕೊಳ್ಳುತ್ತವೆ. ಅದಕ್ಕೆ ಸರಿಯಾಗಿ ಹೊಂದಿಕೊಂಡು ನಡೆದುಕೊಳ್ಳುತ್ತವೆ.
ಊಟದ ತಟ್ಟೆಯ ಮುಂದೆ ಮೌನವಾಗಿ ಕುಳಿತು ನಮ್ಮ ಮುಖ ನೋಡಿದರೆ , ಹಸಿವಾಗುತ್ತಿದೆ, ಅನ್ನ ಹಾಕಿ ಎಂದು ಅರ್ಥ. ನೀರಿನ ಪಾತ್ರೆಯ ಹತ್ತಿರ ಕೂತು ಮಿಯಾವ್ ಎಂದರೆ ನೀರು ಬೇಕು ಎಂದರ್ಥ. ಯಾವ ಸಮಯದಲ್ಲಿ ಯಾರು ಯಾವ ತಿಂಡಿ ಕೊಡುತ್ತಾರೋ ಅವರ ಬಳಿ ಹೋಗಿ ಅದೇ ತಿಂಡಿಗಾಗಿ ಕೂಗುತ್ತವೆ ಇಲ್ಲ ಹಿಂಬಾಲಿಸುತ್ತವೆ.
ಸಸ್ಯಾಹಾರಿಗಳ ಮನೆಯಲ್ಲಿ ಹಾಲು ಮೊಸರು ತಿಂದು ನೆಮ್ಮದಿಯಾಗಿ ಇರುವ ಅವು ಮಾಂಸಾಹಾರಿಗಳ ಮನೆಯಲ್ಲಿ ಮೀನಿನ ಪುಚ್ಚೆ ಎಂದು ಕರೆಸಿಕೊಳ್ಳುತ್ತವೆ. ಪರಿಸರಕ್ಕೆ ಹೊಂದಿಕೊಂಡು ಬಾಳುವ ಗುಣ ಅವುಗಳ ರಕ್ತದಲ್ಲೇ ಇದೆ. ಮರಿಗಳನ್ನು ಕೈಯಲ್ಲಿ ಹಿಡಿದು ಅಭ್ಯಾಸ ಮಾಡಿದರೆ ಅವು ನಮ್ಮಲ್ಲಿ ಹೆಚ್ಚು ವಿಶ್ವಾಸದಿಂದ ಇರುತ್ತವೆ. ಇಲ್ಲವಾದರೆ ನಮ್ಮಿಂದ ದೂರವೇ ಇರುತ್ತವೆ. ಸಣ್ಣ ಮರಿಗಳು ಮನೆಯೊಳಗೆ ಚಿಚ್ಚಿ ಸುಸ್ಸು ಮಾಡುತ್ತವೆ.ದೊಡ್ಡವಾದ ಮೇಲೆ ಹೊರೆಗೆ ಹೋಗುತ್ತವೆ.
ಕೆಲವೊಂದು ಉಪದ್ರವಕಾರಿ ಬೆಕ್ಕುಗಳೂ ಇರುತ್ತವೆ.ಕದ್ದು ಹಾಲು ಕುಡಿಯುವುದು, ಮೀನು ತಿನ್ನುವುದು, ಜಗಳವಾಡುವುದು, ಮರಿಗಳನ್ನು ತಿನ್ನುವುದು ಮಾಡುತ್ತವೆ.
ಅದೇನು ಇರಲಿ ಮುದ್ದು ಮಾಡಿದರೆ ಮನೆಮಕ್ಕಳಂತೆ ಇರುತ್ತವೆ. ಅವುಗಳ ಜೊತೆ ಮಾತನಾಡುವುದು, ಆಟವಾಡುವುದು ನಮ್ಮ ಒತ್ತಡಗಳಿಂದ ಹೊರಬಂದು ನೆಮ್ಮದಿಯಾಗಿ ಇರಲು ಸಹಾಯಮಾಡುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ