ಅವಳೀಗ ಹುಡುಗಿಯಲ್ಲ

Page title ಬಾಲ್ಯದಲ್ಲಿ ‌‌ಹಕ್ಕಿಯಂತೆ ‌ಹಾರಾಡುವ ಹುಡುಗಿ, ತಾನು ಬೆಳೆದಂತೆ, ಆಮೆಯಾಗುವಳು, ಚಿಪ್ಪಿನೊಳಗೇ ಮುದುರಿಹೋಗುವಳು. ಮಾತಿನ ಮಲ್ಲಿ, ಮೌನಗೌರಿಯಾಗುವಳು, ಅದು ತನಗಾಗಿಯೋ, ಹೆತ್ತವರಿಗಾಗಿಯೋ, ಸಮಾಜಕ್ಕಾಗಿಯೋ ಗೊತ್ತಿಲ್ಲ! ವಿದ್ಯೆಕಲಿಯುವ,ಜಗವ ನೋಡುವ ಅವಳಾಸೆಗೆ ನೂರು ಅಡ್ಡಿಗಳು. ಅವಳು ಎಲ್ಲಿ ಹೋದಳು? ಏಕೆ ಹೋದಳು? ಏನು ಬೇಗ? ಏಕೆ ತಡ? ನಿತ್ಯ ಪ್ರಶ್ನೋತ್ತರ. ಅವರೇಕೆ ಹಾಗೆ ಹೇಳಿದರು? ಇವರೇಕೆ ‌ಹೀಗೆ ನೋಡಿದರು? ಅವಳದ್ದು ಬರೀ ಸ್ವಗತಗಳು. ಓದು ಮುಗಿಸಿ,ಕೆಲಸ ಹಿಡಿದು ಕನಸು ಕಾಣುವ ವೇಳೆಗೆ, ಮಗಳಿಗೆ .. ಮದುವೆ ಮಾಡುವುದಿಲ್ಲವೇ? ಕೆಲಸ ಏಕೆ ಹುಡುಗಿಗೆ? ತರಾವರಿ ಪ್ರಶ್ನೆ. ಪರಿಚಿತರ ಮಹದಾಸೆಯ, ಹೆತ್ತವರ ಒತ್ತಾಸೆಯ ಮದುವೆ, ಅವಳಿಗೆ ಕೆರೆಗೆ ‌ಹಾರವಾದಂತೆಯೇ? ಹೊಸ ಮದುವೆಯ ‌ಹೊಸತನ ಬಾಳುವುದೇ ಬಲುದಿನ? ಜವಾಬ್ದಾರಿಗಳ ಹೆಗಲಿಗೇರಿಸಿಕೊಂಡು, ನಿಂದನೆಗಳ ನುಂಗಿಕೊಂಡು, ಹೊಟ್ಟೆ ಉರಿಗೆ ಮದ್ದೇನು? ಎಂದು ಯೋಚಿಸಲೂ ಅವಳಿಗೆ ಸಮಯವೆಲ್ಲಿದೆ? ಹೆತ್ತವರ ಹೆಸರುಳಿಸುವ, ಮನೆಯ ದೀಪವಾಗುವ, ಮಕ್ಕಳ ತಾಯಿಯಾಗುವ, ಸಂಬಂಧಗಳ ಉಳಿಸಿಕೊಳ್ಳುವ ನಿರಂತರ ತಾಕಲಾಟದಲ್ಲಿ, ಸ್ವಾಭಿಮಾನವ ತೊರೆದು, ತನ್ನ ತಾನೇ ಮರೆತು, ಬಾಳ ಬೇಕಿದೆ; ಅವಳೀಗ ಹುಡುಗಿಯಲ್ಲ. ಒಲಿದರೆ ಹೂವಾಗುವಳು ತುಳಿದರೆ ಹಾವಾಗುವಳು. ನೆರಳಾದರೆ ಬಳ್ಳಿಯಾಗುವ ಅವಳು, ಬಿರುಬಿಸಿಲಲ್ಲಿ ಕಳ್ಳಿಗಿಡವಾಗುವಳು. ಗದರಿದರೆ ಹೆದರಲು, ಚುಚ್ಚಿದರೆ ಸಾಯಲು, ಅವಳೀಗ ಹುಡುಗಿಯಲ್ಲ ಕುರುಡಾಗಿ ಪಾಲಿಸಲು, ಮರುಳಾಗಿ ನೆರಳಾಗಲು ಹೇಳಿದ್ದೆಲ್ಲಾ ನಂಬಲು, ಅವಳೀಗ ಮೊದ್ದು ಹುಡುಗಿಯಲ್ಲ, ಬದುಕು ಕಲಿಸಿದ ಪಾಠಗಳು ಬದಲಿಸಿವೆ ಅವಳನು. ಬರಿಯ ನೋಟದಿಂದ, ಅರಿಯಬಲ್ಲಳು ಅಂತರಾಳ, ಸುಳ್ಳೆಂದು ಅರಿತರೂ, ಕೆದಕಿ ತನಗೆ ತಾನೇ, ಗಾಯಮಾಡಳು ಮೂರ್ಖಳಂತೆ, ಅವಳೀಗ ಹುಡುಗಿಯಲ್ಲ. ಎಳೇ ಹುಡುಗಿಯಲ್ಲ..

ಕಾಮೆಂಟ್‌ಗಳಿಲ್ಲ:

ಹಕ್ಕಿ ಗೂಡಿಗೆ ಮರಳಿದೆ

ಕಡಲು ದಾಟಿ ದೂರ ಹಾರಿದೆ ಹೊಸ ಹಕ್ಕಿ, ಹೊಸ ಕನಸು ಕಟ್ಟಲು, ಹೊಸ ಗೂಡು ಹುಡುಕಲು, ಹಸಿದ ಹೊಟ್ಟೆ ಹೊರೆಯಲು, ಜಗವು ಹೊಸತಾಗಿದೆ, ಬಲು ಸುಂದರವಾಗಿದೆ, ಹಳೆಯ ಗೂಡು ಹಳತಾಗಿದೆ,...