ಅಮ್ಮನಾಗುವುದು ಎಂದರೆ

Page title
ಅಮ್ಮನಾಗುವುದಂದರೆ,
ಬರೀ ಮಗಳಿಗೆ ತಾಯಿಯಾಗುವುದಲ್ಲ,
ನನ್ನ ಹೆತ್ತಮ್ಮ ನನ್ನು ನಾನರಿಯುವುದು,
ಅವಳ ಅಂತರಂಗವನು ನಾನುಭವಿ‌ಸುವುದು.

ಅಮ್ಮ ಏಕೆ ‌ಸದಾ ಬಯ್ಯುತ್ತಾಳೆ,
ಸದಾ ಸಿಡುಕುತ್ತಾಳೆ ? ನನ್ನ ಯಕ್ಷಪ್ರಶ್ನೆ
ನನಗೇ ತಿರುಗಿದ ಬಾಣ ವಾಗಿದೆ ,
ಮುದ್ದಿನ ಮಗಳಿಂದ.

ಈಗ ಅರಿವಾಗುತ್ತಿದೆ ಹೆತ್ತಮ್ಮನ ಒಡಲಾಳ,
ಅವಳ ತಳಮಳ.
ಅರಿಯದ ಎಳೆ ಹುಡುಗಿಗೆ ಎಲ್ಲ ವಿವರಿ‌ಸಲಾಗದೆ, 
ಏನೂ ಹೇಳದೆಯೂ ಇರಲಾಗದು.

ಬೆಂಕಿಯ ಮೇಲೆ ಕುಳಿತಂತೆ ಚಡಪಡಿಸುತ್ತಾ,
ಹಣೆಯಲ್ಲಿ ಚಿಂತೆಯ ಗೆರೆ ಮೂಡಿಸುತ್ತಾ,
ಒದ್ದಾಡುವ ಅಮ್ಮ ಕಾಣುತ್ತಾಳೆ
ನನ್ನ ಮುಂದಿನ ಕನ್ನಡಿಯಲ್ಲಿ.

ಅಂದುಕೊಂಡಷ್ಟು ಸುಲಭವಲ್ಲ, 
ಅಂದುಕೊಂಡಂತೆ ಮಕ್ಕಳನ್ನು ಬೆಳೆಸುವುದು,
ತಂತಿ ಯು ಮೇಲೆ ನಡೆದಂತೆ
ಕ್ಷಣ ಮರೆತರೂ ಸೋಲು ಖಚಿತ.

 ವಿದ್ಯೆಯ ಜತೆ  ವಿನಯವನೂ 
ವಿವೇಕದ ಜತೆ  ವಿಧೇಯತೆಯನ್ನೂ,
ಶಿಸ್ತಿನ ಜತೆ ಸಂಸ್ಕಾರವನ್ನೂ,
ನೀತಿಯ ಜತೆ ನಿಯತ್ತನ್ನೂ ಕಲಿ‌ಸಬೇಕಿದೆ.

ಅಡಿಗೆ ಮನೆಯ ಪಾಕದ ಜತೆ,
ಸ‌‌ಹನೆಯ ತೂಕವನ್ನೂ,
ಬುದ್ದಿಯ ಜತೆ ಶುದ್ದಿಯನ್ನೂ
ಅರೆದರೆದು ಕುಡಿಸಬೇಕಿದೆ ಮೂಗು ಹಿಡಿದಾದರೂ. 

ಮುದ್ದಿನ ಮಗಳ ನಾಳೆಗಳು ನಗುತಿರಲು,
ಇಂದು ನಾನು ನಿಷ್ಠುರವಾಗಲೇಬೇಕಿದೆ,
ಅಮ್ಮನ ತತ್ವದಂತೆ , ಅದು ವ್ಯರ್ಥವಾಗುವುದಿಲ್ಲ , ಇದು ಅಮ್ಮನ ನಂಬಿಕೆ .

ಮುಂದೆ ಎಂದಿಗೂ ನಾನು ದೂರುವುದಿಲ್ಲ, 
ನನ್ನ ಹೆತ್ತಮ್ಮನನು, ನನ್ನ ಹೊತ್ತಮ್ಮನನು,
ತೀರಿಸಲೇ ಬೇಕಿದೆ ಅವಳ ಋಣ,
ಮಗಳಿಗೂ ಕಲಿಸಿ ಅವಳ ಗುಣ.
















ಕಾಮೆಂಟ್‌ಗಳಿಲ್ಲ:

ಹಕ್ಕಿ ಗೂಡಿಗೆ ಮರಳಿದೆ

ಕಡಲು ದಾಟಿ ದೂರ ಹಾರಿದೆ ಹೊಸ ಹಕ್ಕಿ, ಹೊಸ ಕನಸು ಕಟ್ಟಲು, ಹೊಸ ಗೂಡು ಹುಡುಕಲು, ಹಸಿದ ಹೊಟ್ಟೆ ಹೊರೆಯಲು, ಜಗವು ಹೊಸತಾಗಿದೆ, ಬಲು ಸುಂದರವಾಗಿದೆ, ಹಳೆಯ ಗೂಡು ಹಳತಾಗಿದೆ,...