ಮನಸಿದೆ ನನಗೆ, ಅದು ಪ್ರೀತಿಗೆ ಬಾಗಿದೆ.
ಕನಸಿದೆ ನನಗೆ, ಅದು ನಿತ್ಯ ಕಾಡಿದೆ.
ಒಲವಿದೆ ನನಗೆ, ಅದು ಆತ್ಮದ ಬಂಧನ.
ಛಲವಿದೆ ನನಗೆ, ಅದು ಸಾಧನೆಗೆ ಸಂಧಾನ.
ಗೆಲುವಿಗೆ ಬೇಕಿದೆ ಪರಮಾತ್ಮನ ಅನುದಾನ.
ಸೋಲಬೇಕಿಲ್ಲ ಪ್ರತಿಬಾರಿಯೂ,
ಕೇಳಬೇಕಿಲ್ಲ ಪ್ರತಿನಿತ್ಯವೂ,
ತಾಳಬೇಕಿಲ್ಲ ಅನುಗಾಲವೂ,
ಹೇಳಬೇಕಿಲ್ಲ ಅನುದಿನವೂ,
ಅನುಸರಿಸಬೇಕಿಲ್ಲ ಅನುಕ್ಷಣವೂ,
ಇದೇನು ಅಹಂಕಾರವಲ್ಲ, ಸ್ವಾಭಿಮಾನ!.
ಆಡಲು ಮಾತಿಲ್ಲ, ಕೇಳಲು ಕಿವಿಯಿಲ್ಲ
ಒಪ್ಪಲು ಮನಸಿಲ್ಲ, ಕಾಣಲು ಕಣ್ಣಿಲ್ಲ,
ಮಿಡಿಯಲು ಹೃದಯವಿಲ್ಲ,
ಅರ್ಥೈಸಲು ಬುದ್ದಿಯಿಲ್ಲ, ಸಂತೈಸಲು ಒಲವಿಲ್ಲ,
ಕಾಯಲು ಕನಸಿಲ್ಲ, ಸಹಿಸಲು ತಾಳ್ಮೆಯೂ ಇಲ್ಲ.
ನಾನೇನು ಕಲ್ಲಲ್ಲ, ಮಿಡಿಯುವ ಮನಸಿದೆ,
ಹೇಳೋದು ಸುಳ್ಳಲ್ಲ, ಆತ್ಮದಾ ಸಾಕ್ಷಿಯಿದೆ,
ಬಾಗೋದು ಪ್ರೀತಿಗೆ, ದರ್ಪಕ್ಕೆ ಅಲ್ಲ.
ನೋಯೋದು ಉಪೇಕ್ಷೆಗೆ, ಉತ್ಪ್ರೇಕ್ಷೆಗಲ್ಲ ,
ಸಂಧಾನ ಬೇಕಿಲ್ಲ, ತುಸು ವ್ಯವಧಾನ ಸಾಕು.
ಮನಸು ಕಹಿಯಾದಾಗ, ನನಗೂ,
ಕೇಳಲು ಕಿವಿ ತೆರೆಯುವುದಿಲ್ಲ,
ಬುದ್ದಿ, ಬುದ್ದಿ ಹೇಳೋದಿಲ್ಲ,
ಬರೀ ಬಾಯಿ ಮಾತಾಡುವುದು,,
ಕೋಪದ ಕೈಯಲ್ಲಿ.
ಮನಸು ತಿಳಿಯಾದಾಗ,
ಎಲ್ಲವೂ ನೇರವಾಗಿಯೇ ಕಾಣುವುದು,
ಸಿಟ್ಟು ಕರಗುವುದು, ಹೃದಯ ಮರುಗುವುದು,
ಇನ್ನು ಬೇಡ ಕೊರಗುವುದು,
ಬದಲಿಸಲಾಗದ ಬದುಕಿಗಾಗಿ,
ನಕ್ಕರೆ ನಗಬೇಕು, ಅತ್ತರೆ ಅಳಬೇಕು,
ಮಾತಿಲ್ಲದಿರೆ ಮೌನಸಮ್ಮತಿ ಸಾಕು,
ಕೇಳದಿರೆ ಹೇಳದಿರಬೇಕು,
ಕೊಡದಿರೆ ಬೇಡದಿರಬೇಕು,
ಕೊಟ್ಟರೆ ಸಾಕೆನಬೇಕು, ಬಿಟ್ಟರೆ ಬೇಡನಬೇಕು.
ಇರುವರೆಗೆ ನಗುತಿರಬೇಕು,
ಬರುವರೆಗೆ ಜೊತೆಗಿರಬೇಕು,
ಮರೆಯಾದರೂ ನೆನಪಿಡಬೇಕು,
ಏಕೆಂದರೆ, ಅರಿತಿರಬೇಕು
ಇದು ಬದುಕಿನ ವಾಸ್ತವ..
ಇದು ಬದುಕಿನ ವಾಸ್ತವ.!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ