ಶ್ರೀ ರಾಮನ ಅಮಿತ ಪಿತೃ ಭಕ್ತಿ,
ಸಹೋದರರ ಮುಗಿಯದ ಭಾತ್ರೃಪ್ರೇಮ,
ಸೀತೆಯ ಕೊನೆಯಿಲ್ಲದ ಶೋಕ,
ಹನುಮ, ಸೇನೆಯ ಸಾಟಿಯಿಲ್ಲದ ಸ್ವಾಮಿನಿಷ್ಠೆ,
ಪ್ರಜೆಗಳ ದೊರೆ ಭಕ್ತಿ,
ಎಲ್ಲದರ ನಡುವೆ, ಅವಳು ಎಲ್ಲಿ ಕಳೆದು ಹೋದಳು?
ಸಾವಿರಾರು ಕನಸುಗಳ ಹೊತ್ತ,
ಹರೆಯದ ಆ ಎಳೆಬಾಲೆ,
ಮದುವೆಯಾಗಿ ಅಕ್ಕನ ಹಿಂದೆ ನಡೆದಳು,
ಮೈದುನನ ಮಡದಿಯಾಗಿ.
ಪತಿಯ ಸತಿಯಾಗಿ ಬಾಳುವ ವೇಳೆ,
ಕಂಡವರ ಹೊಟ್ಟೆಉರಿಗೆ ಬಲಿಯಾಗಿ,
ವನವಾಸಕ್ಕೆ ನಡೆದ ಮರ್ಯಾದಾ ಪುರುಷೋತ್ತಮ,
ಮೆಚ್ಚಿನಿಂದ ಹಿಂಬಾಲಿಸಿದಳು ಸೀತೆ,
ಅವರ ನೆರಳಾದ ಲಕ್ಷ್ಮಣ,
ಅವಳೆಲ್ಲಿ ಹೋದಳು?!
ನೀ ಬರುವೆಯ ಎಂದಾರು ಕೇಳಿದರು?
ಬರಬೇಡವೆಂದಾರು ಹೇಳಿದರು?
ಅವಳಂತರಂಗವನು ಬಲ್ಲವರು ಯಾರು?
ಒಂಟಿಯಾದಳು ಎಲ್ಲರ ನಡುವೆ.
ಕಣ್ಣೀರಲಿ ಒದ್ದೆಯಾಯಿತೇ ದಿಂಬು?
ನಿಟ್ಟುಸಿರಿಗೆ ಬಿಸಿಯಾಯಿತೆ ಅಂತಃಪುರ ?
ಎಲ್ಲಿ ಅಡಗಿತು ಅವಳು ದನಿ?
ಯಾರಿಗಾದರೂ ಕೇಳಿತೇ?
ಊರ್ಮಿಳೆಯ ಮೌನರಾಗ?!...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ