ಹಿಂದಿನ ಕಾಲದಲ್ಲಿ ವಿಚ್ಚೇದನದ ಕಾರಣ ಮತ್ತು ಪರಿಣಾಮಗಳು
ಹಿಂದೆಲ್ಲ ಅವಿಭಕ್ತ ಕುಟುಂಬಗಳು ಇತ್ತು.ಮನೇ ತುಂಬಾ ಜನರಿದ್ದರು. ಮನೆಯ ಹಿರಿಯರು ಪ್ರತೀ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಮಾತು ಮೀರುವ ದೈರ್ಯ ಯಾರಿಗೂ ಇರಲಿಲ್ಲ.ಅದು ಬರೀ ಭಯ ಮಾತ್ರ ಅಲ್ಲ, ಗೌರವವೂ ಇತ್ತು. ಅಂತಹ ಕಾಲದಲ್ಲಿ ವಿಚ್ಛೇದನಗಳು ಬಲು ಅಪರೂಪ. ಕೆಲವೊಂದು ಬಾರಿ ಪರಿಸ್ಥಿತಿಗಳು ಕೈಮೀರಿ ಪತಿಪತ್ನಿ ದೂರಾಗುತ್ತಿದ್ದರು. ತಪ್ಪು ಯಾರದ್ದೇ ಆಗಿದ್ದರೂ, ಗಂಡ ಬಿಟ್ಟವಳು ಎಂಬ ಹಣೆಪಟ್ಟಿ ಹೆಣ್ಣಿನ ಪಾಲಿಗೆ ಕಾಯಂ ಆಗಿ ಇರುತಿತ್ತು. ಆಮೇಲಿನ ಅವಳ, ಅವಳ ಮಕ್ಕಳ ಜೀವನ ನರಕಸದೃಶ್ಯವಾಗಿರುತಿತ್ತು. ಅವಳಿಗೆ ತವರು ಮನೆಯಲ್ಲಿ ಯಾವ ಆದರವೂ ಸಿಗುತ್ತಿರಲಿಲ್ಲ. ಕಾರಣ,ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬುದು ಬರೀ ಗಾದೆಮಾತಾಗಿರದೆ ನಿಜವೆಂದೇ ನಂಬಿದ ಕಾಲವದು.ಅದು ಅನಿವಾರ್ಯವೂ ಆಗಿತ್ತು. ಮನೆ ತುಂಬ ಮಕ್ಕಳು. ಅವರ ಹೊಟ್ಟೆಬಟ್ಟೆ ನೋಡಿಕೊಳ್ಳುವುದೇ ದೊಡ್ಡ ಸಾಹಸ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಸಾಕಪ್ಪಾ ಸಾಕು, ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಅವರು ತಿರುಗಿ ಮನೆಗೆ ಬಂದರೆ ಹೇಗಿರಬೇಡ!? ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳಾಗಿರುತಿದ್ದರು. ತಮ್ಮ ಮನೆಯ ವಾಸ್ತವ ಪರಿಸ್ಥಿತಿ ಅರಿತಿದ್ದ ಹೆಣ್ಣು ಮಕ್ಕಳು, ತವರು ಮನೆಯ ದಾರಿ ಮರೆತವರಂತೆ, ಎಲ್ಲ ಕಷ್ಟ ನುಂಗಿಕೊಂಡು, ಎಲ್ಲರ ಜೊತೆ ಹೊಂದಿಕೊಂಡು ಹೇಗೋ ಬಾಳುತ್ತಿದ್ದರು. ನೂರರಲ್ಲಿ ಒಬ್ಬರು ಸುಖವಾಗಿಯೂ ಇದ್ದರು.
ಇಂದಿನ ಕಾಲದ ವಿಚ್ಚೇದನಗಳ ಕಾರಣಗಳು
ಈಗ ಕಾಲ ಬದಲಾಗಿದೆ. ಎಲ್ಲೆಲ್ಲು ವಿಭಕ್ತ ಕುಟುಂಬಗಳು. ಓದಿ, ಕೆಲಸ ಪಡೆದು ಅಚ್ಚು ಕಟ್ಟಾಗಿ ಮನೆ ಮಾಡಿಕೊಂಡು ತಮ್ಮ ಪಾಡಿಗೆ ತಾವಿರುವ ಕುಟುಂಬಗಳು. ಒಂದೋ ಎರಡೋ ಮಕ್ಕಳು.
- ಅತಿ ಮುದ್ದಿನಿಂದ ಬೆಳೆಸಿ, ಓದಿಸಿ, ಬೇಕಾದ್ದು ಕೊಡಿಸಿ, ಕಷ್ಟ,ನಷ್ಟ, ಹೊಂದಾಣಿಕೆ ಅರಿಯದೆ ಬೆಳೆದ ಮಕ್ಕಳು, ಅದೇ ಜೀವನ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ.
- ತುಸು ಏರುಪೇರಾದರೂ ಸಹಿಸುವ ಶಕ್ತಿ ಅವರಿಗಿಲ್ಲ.
- ತನ್ನದೇ ಮಾತು ನಡೆಯಬೇಕೆಂಬ ಹಟ, ಅಹಂ.
- ಸಾಮಾಜಿಕ ಜಾಲತಾಣಗಳ ಪ್ರಭಾವಿತರಾಗಿ, ಚಂಚಲ ಮನಸಿನಿಂದ ಆಕರ್ಷಣೆ, ಆಮಿಷಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.
- ಯಾವುದೇ ಮುಂದಾಲೋಚನೆ ಇಲ್ಲದೆ ಮಾಡಿದ ತಪ್ಪುಗಳಿಗೆ ಬೆಲೆ ತೆರುತ್ತಿದ್ದಾರೆ.
- ಕೆಲವೊಂದು ಬಾರಿ ಅತಿಯಾಸೆಗೆ ಬಲಿಯಾಗುತ್ತಾರೆ.
- ಪರಸ್ಪರರ ಬಗ್ಗೆ ಇರುವ ಅಪನಂಬಿಕೆಯೂ ವಿಚ್ಛೇದನದ ಪ್ರಮುಖ ಕಾರಣಗಳಲ್ಲಿ ಒಂದು.
- ಗಂಡ ಮತ್ತು ಮಕ್ಕಳು ಮಾತ್ರ ತನ್ನ ಸಂಸಾರ ಎನ್ನುವ ಸ್ವಾರ್ಥಿ ಹೆಣ್ಣುಮಕ್ಕಳು,
- ಮದುವೆ ಆದ ಮೇಲೆ ,ನೀನು ನಿನ್ನ ಮನೆಯವರನ್ನು ನಿನ್ನ ಸ್ವಂತಿಕೆಯನ್ನು ಮರೆತುಬಿಡು ಎನ್ನುವ ಗಂಡಸರು.
ವಿಚ್ಚೇದನವನ್ನು ಕಡಿಮೆ ಮಾಡಲು ಉಪಾಯಗಳು
- ಗಂಡು ಮಕ್ಕಳು ಹೆಣ್ಣನ್ನು ತನ್ನಂತೆ ಗೌರವಿಸಲು ಕಲಿಯಬೇಕು.
- ಅವರ ಆಸೆ ಆಕಾಂಕ್ಷೆಗಳನ್ನು ತಿಳಿದು ಅದಕ್ಕೆ ಬೆಂಬಲಿಸಬೇಕು.
- ಎಲ್ಲ ಕೆಲಸಗಳನ್ನು ಅವರ ಜೊತೆ ಹೊಂದಿಕೊಂಡು ಮಾಡಬೇಕು.
- ಹೆಣ್ಣು ಮಕ್ಕಳು, ತಮ್ಮ ಗಂಡನನ್ನು ಮತ್ತು ಅವರ ಮನೆಯವರನ್ನು ತಮ್ಮ ಸ್ವಂತದವರಂತೆ ಪ್ರೀತಿಸಲು, ಗೌರವಿಸಲು ಕಲಿಯಬೇಕು.
- ತಮ್ಮ ಗಂಡನ ಇತಿಮಿತಿಗಳನ್ನು ಅರಿತು ಅದಕ್ಕೆ ತಕ್ಕಂತೆ ಹೊಂದಿಕೊಂಡು ಬದುಕಬೇಕು.
- ಜೀವನಸಂಗಾತಿಯ ಭಾವನೆಗಳನ್ನು, ಅಭಿರುಚಿಗಳನ್ನು ಗೌರವಿಸಬೇಕು.
- ಬಿನ್ನಾಭಿಪ್ರಾಯಗಳು ಸಹಜ. ತನ್ನದೇ ಹಟ ಸಾದಿಸದೆ ಅನುಸರಿಸಿಕೊಂಡು ಹೋಗಬೇಕು.
- ಯಾವುದೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ, ತಮ್ಮ ಹೆತ್ತವರ ಬಗ್ಗೆ, ಮಕ್ಕಳ ಭವಿಷ್ಯದ ಬಗ್ಗೆ ಸರಿಯಾಗಿ ಯೋಚಿಸಬೇಕು.
- ತಮ್ಮ ಒಂದು ನಿರ್ಧಾರದಿಂದ ಆಗುವ ಪರಿಣಾಮಗಳ ಬಗ್ಗೆ ಸರಿಯಾಗಿ ಯೋಚಿಸಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ