ಕಲಿತ ವಿದ್ಯೆಯ ಮರೆತು,
ಕೋಟಿ ವಿದ್ಯೆಯ ಕಲಿತು,
ಬದುಕಿನ ಸಾಗರದಿ ಈಜು ಕಲಿಯುತ್ತಾ,
ಬಂದ ಅಲೆಯ ಜೊತೆ ಒಂದಾಗಿ,
ತೇಲುತ್ತ ಮುಳುಗುತ್ತ , ಕನಸಿನ ಹರಿಗೋಲು ಹಿಡಿದು, ಸೋಲದಾ ಛಲದಲಿ,
ಮುಂದೆ ಸಾಗುವಳು, ದಣಿವು ಮರೆತು.
ಕರುಳ ಬಳ್ಳಿಗಳ ನೆರಳು ತಾನಾಗಿ,
ತುಸು ಬಾಡದಂತೆ, ನೀರು ಗೊಬ್ಬರವುಣಿಸಿ,
ಎಲ್ಲೆಲ್ಲೋ ಹರಡದಂತೆ, ಊರುಗೋಲನು ಕೊಟ್ಟು, ಮನತುಂಬ ಆಸೆ, ನಂಬಿಕೆಯಿಟ್ಟು
ಭರವಸೆಯ ನಾಳೆಗಾಗಿ, ಹಗಲುಗನಸುಗಳ ಕಾಣುತ್ತಾ, ಅದ ನಿಜವಾಗಿಸುವ ಭರದಲ್ಲಿ ,
ಮರೆತಿಹಳು ಹಗಲು ರಾತ್ರಿಗಳ..
ಅತ್ತರೂ ಅಳದಂತೆ ,
ನಗದಿದ್ದರೂ ನಗುತ್ತಿರುವಂತೆ,
ಖುದ್ದು ನಟಿಸುವ ಅವಳು,
ಮಹಾನಟಿಯಲ್ಲ, ಹಣಕಾಗಿ ನಟಿಸುವುದೂ ಅಲ್ಲ, ತನ್ನವರಿಗಾಗಿ, ನೋವ ನುಂಗಿದವಳು,
ಹೊತ್ತು ಹೆತ್ತವರ ಋಣವ ಮರೆಯದ,
ಪಣವ ತೊಟ್ವವಳು.
ಎಲ್ಲ ಜಂಜಡದಲ್ಲಿ, ಮರೆತಿಹಳೆ ತನ್ನ ತಾನು,
ಇಲ್ಲ ಹಾಗೇನಿಲ್ಲ, ಸಮಯ ಹುಡುಕುವಳು,
ತನಗಾಗಿ ತಾನು, ಬಳಲಿ ಬೆಂಡಾದಾಗ, ಒಂದು ನಿಟ್ಟು ಸಿರು ಬಿಡಲು, ಬಿಡುವಾದ ಕಿವಿಗೆ ಆಕಾಶವಾಣಿಯ ಕಲರವ ಕೇಳಿಸಲು, ಮನದ ಭಾರವ ಲೇಖನಿಗೆ ಹೇಳಲು, ಕೆಲಸದ ಜೊತೆ ಮನೋರಂಜಿಸಲು, ಕಲಿತಿದ್ದಾಳೆ ತನ್ನನ್ನು ತಾನೇ ಸಂತೈಸಲು, ನೋವು ಮರೆತು ನಗಲು,
ತುಸು ನಗಲು....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ