ಭಾನುವಾರ, ಡಿಸೆಂಬರ್ 1, 2024

ಬಾಳ ಪಯಣ

ಅಪ್ಪನ ಪ್ರೀತಿಯ ಬೆಚ್ಚಗೆ ನೆರಳಲ್ಲಿ,
ಅಮ್ಮನ ಹುಸಿಮುನಿಸಿನಲ್ಲಿ
ಯಶಸಿನ ಭೃಂಗದ ಬೆನ್ನೇರಿ 
ಕನಸುಗಳ ಹಕ್ಕಿಗೆ ರೆಕ್ಕೆ ಹಚ್ಚುತ್ತಾ 
ಬಾನಾಡಿಯಾಗಿ ತೇಲುತ್ತಿದ್ದವಳು 
ರೆಕ್ಕೆ ಮುರಿದು ಬೀಳಲು ಏನು ಕಾರಣ?

ಜೀವ ವಾಹಿನಿಯಾಗಿ, ಗುಪ್ತಗಾಮಿನಿಯಾಗಿ
ಹರಿಯುತ್ತಿದ್ದ ಪ್ರೀತಿಯ ಸೆಲೆ,
ಇದ್ದಕಿದ್ದಂತೆ ಬತ್ತಿ ಹೋಗಿದೆ; 
ಆಶ್ರಯಿಸಿದ ಕನಸುಗಳ ಗತಿಯೇನು?

ಆಮೆಯಂತೆ ಚಿಪ್ಪಿನೊಳಗೇ ಮುದುರಿಹೋದಳು,
ಆದರೂ ಬಾಡಿದ ಹೂ ವಾಗಲಿಲ್ಲ,
ಬಣ್ಣದ ಚಿಟ್ಟೆಯಾದಳು!
ಗೂಡೊಳಗಿಂದ ಹೊರಬಂದಳು,
ಬದಲಾವಣೆಯ ಜಗದ ನಿಯಮದಂತೆ.

ಕಳೆದುಹೋದ ಪ್ರೀತಿಯ ಸೆಲೆಗಾಗಿ
ಮತ್ತೆ ಕಾದಳು ಶಬರಿಯಂತೆ.
ಸಿಕ್ಕಿತು ಜೀವಸೆಲೆ, ಎದ್ದಿತು ನಗುವಿನಲೆ
ಹೊಸಜೀವಕೆ ಜೀವನವ ನೀಡಿ 
ತಾನು ಮರುಹುಟ್ಟು ಪಡೆದಿವೆ ವೇಳೆ 
ಮತ್ತೆ ಬರಡಾಯಿತೇ ಜೀವಸೆಲೆ?

ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗಳ
ಕುತಂತ್ರಕ್ಕೆ ಬಲಿಯಾಗಿ,
ನೋವಿನಲೆಯಲ್ಲಿ ತೇಲಿಹೋದಳೇ?
ಭೂಮಿಗೆ ಕುಸಿದವಳನ್ನು,ನ
ಕೈಹಿಡಿದು ಎತ್ತಿದವರಾರು?

ತನಗೆ ತಾನೇ ತಾಯಿಯಾದಳು 
ತನ್ನ ಬೆನ್ನನ್ನು ನೇವರಿಸಿಕೊಂಡಳು
ಕಣ್ಣೀರನ್ನು ಒರೆಸಿಕೊಂಡಳು
ನೋವಲ್ಲೇ ನೇಗಿಲು ಕಲಿತಳು
ಮತ್ತೆ ಎದ್ದು ನಿಂತಳು,
ಮುನ್ನುಗ್ಗುವ ಛಲದಲಿ.

ಅಪ್ಪ ಕಲಿಸಿದ ಸಂಸ್ಕಾರ,
ತಾಯಿ ನೀಡಿದ ಜ್ಞಾನದೀಪ
ಅವಳು ನಂಬಿದ ಸತ್ಯಗಳು 
ಈ ಬದುಕು ಕಲಿಸಿದ ಪಾಠಗಳು
ಅವಳ ಬಾಳನು ಮುನ್ನಡೆಸುತಿವೆ.
ಅವಳು ಬಾಳನು ಮುನ್ನಡೆಸುತಿವೆ...


ಕಾಮೆಂಟ್‌ಗಳಿಲ್ಲ:

ಮನಸಿನ ನೆಮ್ಮದಿಗಾಗಿ

ಅರಿತರೂ ಅರಿಯದಂತೆ, ಕಂಡರೂ ಕಾಣದಂತೆ, ಕೇಳಿದರೂ ಕೇಳದಂತೆ, ಅತ್ತರೂ ಹೇಳದಂತೆ , ನೊಂದರೂ ಕಾಣದಂತೆ, ನಿನ್ನ ಪಾಡಿಗೆ ನೀನೀರು, ನಿನ್ನ ಮನಸಿನ ನೆಮ್ಮದಿಗಾಗಿ. ಕೆದಕಿದಷ್ಟೂ ರ...